
ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್ 19 ಮಹಿಳಾ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಹೊಸ ಇತಿಹಾಸ ಬರೆದಿದೆ. ಯುಎಇ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಟೀಮ್ ಇಂಡಿಯಾಗೆ ಲಭಿಸಿತ್ತು.

ಅದರಂತೆ ಇನಿಂಗ್ಸ್ ಆರಂಭಿಸಿದ ಶ್ವೇತಾ ಸೆಹ್ರಾವತ್ ಹಾಗೂ ಶಫಾಲಿ ವರ್ಮಾ ಸ್ಪೋಟಕ ಇನಿಂಗ್ಸ್ ಆಡಿದರು. ಯುಎಇ ಬೌಲರ್ಗಳ ಬೆಂಡೆತ್ತಿದ ಈ ಜೋಡಿ ಕೇವಲ 8 ಓವರ್ಗಳಲ್ಲಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಈ ಹಂತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಶಫಾಲಿ ವರ್ಮಾ ಔಟಾದರು.

ಔಟಾಗುವ ಮುನ್ನ ಶಫಾಲಿ ವರ್ಮಾ ಕೇವಲ 34 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 12 ಫೋರ್ನೊಂದಿಗೆ 78 ರನ್ ಚಚ್ಚಿದ್ದರು. ಇನ್ನು ನಾಯಕಿ ಔಟಾದ ಬಳಿಕ ಕೂಡ ಶ್ವೇತಾ ಅಬ್ಬರ ಮುಂದುವರೆದಿತ್ತು. ರಿಚಾ ಘೋಷ್ ಜೊತೆಗೂಡಿ ಇನಿಂಗ್ಸ್ ಕಟ್ಟಿದ ಶ್ವೇತಾ 49 ಎಸೆತಗಳಲ್ಲಿ 10 ಫೋರ್ನೊಂದಿಗೆ ಅಜೇಯ 74 ರನ್ ಚಚ್ಚಿದರು. ಪರಿಣಾಮ ಟೀಮ್ ಇಂಡಿಯಾ ಮೊತ್ತ 200ರ ಗಡಿದಾಟಿತು.

ಇದೇ ವೇಳೆ ಶ್ವೇತಾ ಸೆಹ್ರಾವತ್ಗೆ ಉತ್ತಮ ಸಾಥ್ ನೀಡಿದ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ 29 ಎಸೆತಗಳಲ್ಲಿ 5 ಫೋರ್ ಹಾಗೂ 2 ಸಿಕ್ಸ್ನೊಂದಿಗೆ 49 ರನ್ ಬಾರಿಸಿದರು. ಅದರಂತೆ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 219 ರನ್ ಕಲೆಹಾಕಿದೆ.

ಇದರೊಂದಿಗೆ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ನಲ್ಲಿ 200 ರನ್ ಕಲೆಹಾಕಿದ ಮೊದಲ ತಂಡವೆಂಬ ವಿಶ್ವ ದಾಖಲೆ ಟೀಮ್ ಇಂಡಿಯಾ ಪಾಲಾಯಿತು. ಅಲ್ಲದೆ ಅಂಡರ್-19 ಮಹಿಳಾ ವಿಶ್ವಕಪ್ನಲ್ಲಿ ಅತ್ಯಧಿಕ ಸ್ಕೋರ್ಗಳಿಸಿದ ದಾಖಲೆ ಕೂಡ ಇದೀಗ ಭಾರತ ತಂಡದ ಹೆಸರಿಗೆ ಸೇರ್ಪಡೆಯಾಗಿದೆ.
Published On - 3:58 pm, Mon, 16 January 23