Updated on: Sep 11, 2022 | 8:32 PM
ಭಾರತದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಕೆಲ ದಿನಗಳಿಂದ ಟೀಂ ಇಂಡಿಯಾದಿಂದ ದೂರ ಉಳಿದಿದ್ದರು. ಆದರೆ, ಈಗ ಅವರ ಬದುಕಿನ ಹೊಸ ಇನ್ನಿಂಗ್ಸ್ ಆರಂಭವಾಗಲಿದೆ. ಈ ಸ್ಟಾರ್ ಮಹಿಳಾ ಆಟಗಾರ್ತಿ ಶೀಘ್ರದಲ್ಲೇ ಸಪ್ತಪದಿ ತುಳಿಯಲ್ಲಿದ್ದು, ಇದನ್ನು ಸ್ವತಃ ವೇದಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.
ವೇದಾ ಅವರು ತಮ್ಮ ಗೆಳೆಯ ಮತ್ತು ಈಗ ನಿಶ್ಚಿತ ವರ ಅರ್ಜುನ್ ಹೊಯ್ಸಳ ಅವರೊಂದಿಗೆ ಕಾಣಿಸಿಕೊಂಡಿರುವ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅರ್ಜುನ್ ಮೊಣಕಾಲಿನ ಮೇಲೆ ಕುಳಿತು ತುಂಬಾ ರೋಮ್ಯಾಂಟಿಕ್ ಆಗಿ ವೇದಾಗೆ ಪ್ರಪೋಸ್ ಮಾಡುತ್ತಿರುವುದು ಕಂಡುಬಂದಿದೆ.
ವೇದಾ ಅವರನ್ನು ವರಿಸಲಿರುವ ಅರ್ಜುನ್ ಕೂಡ ಕ್ರಿಕೆಟಿಗರಾಗಿದ್ದು, ಅವರು ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕದ ಪರವಾಗಿ ಆಡುತ್ತಾರೆ. 2016 ರಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದ ಅರ್ಜುನ್ ಕೂಡ ತಂಡದ ಉತ್ತಮ ಬ್ಯಾಟ್ಸ್‌ಮನ್ ಆಗಿದ್ದಾರೆ. ಆದರೆ, ಅವರು ಇನ್ನೂ ಐಪಿಎಲ್ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಾರ್ಪಣೆ ಮಾಡಲು ಸಾಧ್ಯವಾಗಿಲ್ಲ. 32 ವರ್ಷದ ಅರ್ಜುನ್ 2019 ರ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಶಿವಮೊಗ್ಗ ಲಯನ್ಸ್ ಪರ ಆಡಿದ್ದರು.
ಕಳೆದ ಕೆಲವು ವರ್ಷಗಳು ವೇದಾ ಕೃಷ್ಣಮೂರ್ತಿಯವರಿಗೆ ಉತ್ತಮವಾಗಿಲ್ಲ. ಅವರು ಟೀಮ್ ಇಂಡಿಯಾದಿಂದ ಹೊರಗಿದ್ದರು, ಆದರೆ ಅವರ ಕುಟುಂಬವೂ ಸಾಕಷ್ಟು ಕಷ್ಟಗಳನ್ನು ಎದುರಿಸಿತು. 2021 ರಲ್ಲಿ, ಕೊರೊನಾದ ಎರಡನೇ ಅಲೆಯು ಅವರ ತಾಯಿ ಮತ್ತು ಸಹೋದರಿ ಇಬ್ಬರನ್ನೂ ಬಲಿಪಡೆಯಿತು. ಇದು ವೇದ ಅವರ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರಿತ್ತು.
ವೇದಾ ಕೇವಲ 18 ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಈ ಅವಧಿಯಲ್ಲಿ ಅವರು ಭಾರತದ ಪರ 48 ODI ಮತ್ತು 76 T20 ಪಂದ್ಯಗಳನ್ನು ಆಡಿದ್ದಾರೆ. ಇದುವರೆಗೆ 10 ಅರ್ಧಶತಕಗಳನ್ನು ಬಾರಿಸಿರುವ ವೇದಾ ಒಂದೇ ಒಂದು ಶತಕವನ್ನು ಗಳಿಸಲು ಸಾಧ್ಯವಾಗಿಲ್ಲ.
Published On - 8:32 pm, Sun, 11 September 22