
ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಮೂರು ಗೆಲುವು ದಾಖಲಿಸಿದೆ. ಈ ಗೆಲುವುಗಳೊಂದಿಗೆ ಭಾರತ ತಂಡ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಮೂಲಕ ಪಾಕಿಸ್ತಾನ್ ತಂಡದ ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದನ್ನು ಟೀಮ್ ಇಂಡಿಯಾ ಸರಿಗಟ್ಟಿದೆ.

ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸತತವಾಗಿ ಅತೀ ಹೆಚ್ಚು ಸರಣಿಗಳನ್ನು ಗೆದ್ದ ವಿಶ್ವ ದಾಖಲೆ ಪಾಕಿಸ್ತಾನ್ ತಂಡದ ಹೆಸರಿನಲ್ಲಿದೆ. ಈ ದಾಖಲೆಯನ್ನು ಇದೀಗ ಟೀಮ್ ಇಂಡಿಯಾ ಸರಿಗಟ್ಟುವ ಮೂಲಕ ಹೊಸ ಇತಿಹಾಸ ನಿರ್ಮಿಸುವತ್ತ ದಾಪುಗಾಲಿಟ್ಟಿದೆ.

ಪಾಕಿಸ್ತಾನ್ ತಂಡವು 2016 ರಿಂದ 2018 ರ ನಡುವೆ ಬರೋಬ್ಬರಿ 11 ಸರಣಿಗಳನ್ನು ಗೆದ್ದುಕೊಂಡಿತ್ತು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸತತವಾಗಿ ಅತ್ಯಧಿಕ ಸರಣಿಗಳನ್ನು ಗೆದ್ದ ತಂಡವೆಂಬ ಭರ್ಜರಿ ದಾಖಲೆಯೊಂದನ್ನು ನಿರ್ಮಿಸಿದ್ದರು. ಇದೀಗ ಈ ದಾಖಲೆಗೆ ಸರಿಸಮಾನವಾಗಿ ನಿಲ್ಲುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ.

ಭಾರತ ತಂಡವು ಕೊನೆಯ ಬಾರಿ ಟಿ20 ಸರಣಿ ಸೋತಿದ್ದು 2023 ರಲ್ಲಿ. ವೆಸ್ಟ್ ಇಂಡೀಸ್ ವಿರುದ್ಧದ ಈ ಸೋಲಿನ ಬಳಿಕ ಟೀಮ್ ಇಂಡಿಯಾ ತಂಡವು ಸತತವಾಗಿ ಟಿ20 ಸರಣಿ ಗೆಲುತ್ತಾ ಬಂದಿದೆ. ಈ ದಾಖಲೆಯ ನಾಗಾಲೋಟ ಇದೀಗ ನ್ಯೂಝಿಲೆಂಡ್ ವಿರುದ್ಧ ಕೂಡ ಮುಂದುವರೆದಿದೆ.

ಈ ಮೂಲಕ ಟೀಮ್ ಇಂಡಿಯಾ ಸತತವಾಗಿ 11 ಟಿ20 ಸರಣಿಗಳನ್ನು ಗೆದ್ದುಕೊಂಡು, ಪಾಕಿಸ್ತಾನ್ ತಂಡದ ವಿಶ್ವ ದಾಖಲೆಯನ್ನು ಸರಿಗಟ್ಟಿದೆ. ಇನ್ನು ಜುಲೈನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಭಾರತ ತಂಡ ಗೆದ್ದುಕೊಂಡರೆ, ಟಿ20 ಇತಿಹಾಸದಲ್ಲೇ ಸತತವಾಗಿ ಅತ್ಯಧಿಕ ಸರಣಿ ಗೆದ್ದ ವಿಶ್ವ ದಾಖಲೆಯೊಂದು ಟೀಮ್ ಇಂಡಿಯಾ ಪಾಲಾಗಲಿದೆ.