ಭಾರತ ಹಾಗೂ ಐರ್ಲೆಂಡ್ ನಡುವಣ ಸರಣಿಗೆ ಇಂದು ಚಾಲನೆ ಸಿಗಲಿದೆ. ಮೂರು ಪಂದ್ಯಗಳ ಟಿ20 ಸರಣಿ ಪೈಕಿ ಇಂದು ಡಬ್ಲಿನ್ನ ದಿ ವಿಲೇಜ್ನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಯುವ ಪಡೆಯಿಂದ ಕೂಡಿರುವ ಟೀಮ್ ಇಂಡಿಯಾವನ್ನು ಜಸ್ಪ್ರಿತ್ ಬುಮ್ರಾ ನಾಯಕನಾಗಿ ಮುನ್ನಡೆಸುತ್ತಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಯಲ್ಲಿ ಭಾರತದ ಯುವಕರು ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರದೆ ಸರಣಿಯನ್ನು ಕಳೆದುಕೊಂಡಿದ್ದರು. ಇದೀಗ ಐರಿಷ್ ನಾಡಲ್ಲಿ ಯಾವ ರೀತಿ ಪ್ರದರ್ಶನ ತೋರುತ್ತಾರೆ ಎಂಬುದನ್ನು ನೋಡಬೇಕಿದೆ.
ಜಸ್ಪ್ರಿತ್ ಕಮ್ಬ್ಯಾಕ್ ಟೀಮ್ ಇಂಡಿಯಾಕ್ಕೆ ಆನೆಬಲ ಬಂದಂತಾಗಿದೆ. ಸೆಪ್ಟೆಂಬರ್ 2022 ರಿಂದ ತಂಡದಿಂದ ಹೊರಗುಳಿದಿದ್ದ ಬುಮ್ರಾ, ಕಳೆದ ಬಾರಿಯ ಏಷ್ಯಾಕಪ್, ಟಿ20 ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಂತಹ ಪ್ರಮುಖ ಟೂರ್ನಿಗಳಿಂದ ಹೊರಗುಳಿದಿದ್ದರು. ಇದೀಗ ಐರ್ಲೆಂಡ್ ಸರಣಿ ಮೂಲಕ ಕಮ್ಬ್ಯಾಕ್ ಮಾಡುತ್ತಿದ್ದಾರೆ.
ಬುಮ್ರಾ ಜೊತೆಗೆ ಪ್ರಸಿದ್ಧ್ ಕೃಷ್ಣ ಕೂಡ ತಂಡ ಸೇರಿಕೊಂಡಿದ್ದಾರೆ. ಏಷ್ಯಾಕಪ್ ಹಾಗೂ ವಿಶ್ವಕಪ್ ದೃಷ್ಟಿಯಿಂದ ಇವರಿಬ್ಬರ ಆಗಮನ ಭಾರತಕ್ಕೆ ಪ್ಲಸ್ ಪಾಯಿಂಟ್. ಇವರ ಜೊತೆ ಬೌಲಿಂಗ್ ವಿಭಾಗದಲ್ಲಿ ಆರ್ಶ್ದೀಪ್ ಸಿಂಗ್, ಮುಖೇಶ್ ಕುಮಾರ್, ಆವೇಶ್ ಖಾನ್ ಇದ್ದಾರೆ.
ಐರ್ಲೆಂಡ್ ವಿರುದ್ಧದ ಟಿ20 ಸರಣಿಯಿಂದ ಕೊಹ್ಲಿ, ರೋಹಿತ್ರಂತಹ ಪ್ರಮುಖ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತದ ಪುರುಷರ ಕ್ರಿಕೆಟ್ ತಂಡವನ್ನು ಮುನ್ನಡೆಸಲಿರುವ ರುತುರಾಜ್ ಗಾಯಕ್ವಾಡ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ.
ಚೊಚ್ಚಲ ಕೆರಿಬಿಯನ್ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರಿಬ್ಬರು ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯವುದು ಖಚಿತ.
ಸಂಜು ಸ್ಯಾಮ್ಸನ್ ಆಯ್ಕೆ ಇನ್ನೂ ಖಚಿತವಾಗಿಲ್ಲ. ಸತತ ವೈಫಲ್ಯ ಅನುಭವಿಸಿರುವ ಸಂಉ ಬದಲಿಗೆ ಅವಕಾಶಕ್ಕಾಗಿ ಕಾಯುತ್ತಿರುವ ಜಿತೇಶ್ ಶರ್ಮಾ ಅವರನ್ನು ಆಡಿಸಿದರೆ ಅಚ್ಚರಿ ಪಡಬೇಕಿಲ್ಲ. ಇನ್ನು ಫೆಬ್ರವರಿ 2022 ರಲ್ಲಿ ಭಾರತ ಪರ ಕೊನೆಯ ಬಾರಿಗೆ ಟಿ20 ಪಂದ್ಯ ಆಡಿದ್ದ ಶಿವಂ ದುಬೆ ಅವರೊಂದಿಗೆ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತದ ಸಂಭಾವ್ಯ ಪ್ಲೇಯಿಂಗ್ XI: ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ಶಿವಂ ದುಬೆ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ / ಜಿತೇಶ್ ಶರ್ಮಾ (WK), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್ / ಶಹಬಾಜ್ ಅಹ್ಮದ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಜಸ್ಪ್ರಿತ್ ಬುಮ್ರಾ (ನಾಯಕ).