ಆಗಸ್ಟ್ 18ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ಹಾಗೂ ಐರ್ಲೆಂಡ್ ತಂಡಗಳು ಸನ್ನದ್ಧವಾಗಿವೆ. ಉಭಯ ತಂಡಗಳ ನಡುವಣ ಮೊದಲ ಟಿ20 ಪಂದ್ಯ ಇದೇ ಶುಕ್ರವಾರದಂದು, ಡಬ್ಲಿನ್‌ನ ದಿ ವಿಲೇಜ್ ಮೈದಾನದಲ್ಲಿ ನಡೆಯಲ್ಲಿದೆ.
ಟೀಂ ಇಂಡಿಯಾಕ್ಕೆ ಹೋಲಿಸಿದರೆ, ಐರ್ಲೆಂಡ್ ಅಷ್ಟೇನೂ ಬಲಿಷ್ಠ ತಂಡವಾಗಿಲ್ಲದಿದ್ದರೂ, ಲೋರ್ಕನ್ ಟಕೆಟ್, ಕರ್ಟಿಸ್ ಕ್ಯಾಂಫರ್, ಹ್ಯಾರಿ ಟೆಕ್ಟರ್ ಮತ್ತು ಜೋಶುವಾ ಲಿಟಲ್‌ರಂತಹ ಪ್ರತಿಭೆಗಳನ್ನು ಹೊಂದಿರುವ ಐರಿಶ್ ತಂಡವನ್ನು ಬುಮ್ರಾ ಪಡೆ ಕಡೆಗಣಿಸುವಂತಿಲ್ಲ.
ಟಿ20 ಯಲ್ಲಿ ಐರ್ಲೆಂಡ್ ದಾಖಲೆಯನ್ನು ನೋಡುವುದಾದರೆ.. 2008 ರಿಂದ ಒಟ್ಟು 152 ಟಿ20 ಪಂದ್ಯಗಳನ್ನು ಆಡಿರುವ ಐರ್ಲೆಂಡ್, 65 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಒಂದು ಪಂದ್ಯ ಟೈ ಮತ್ತು ಏಳು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿವೆ.
ಇನ್ನು ಭಾರತ ಹಾಗೂ ಐರ್ಲೆಂಡ್ ಈ ಚುಟುಕು ಮಾದರಿಯಲ್ಲಿ ಐದು ಪಂದ್ಯಗಳನ್ನು ಆಡಿವೆ. ಈ ಐದೂ ಪಂದ್ಯಗಳಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸಿದೆ.
2009ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಬಲಿಷ್ಠ ಭಾರತ ತಂಡದ ವಿರುದ್ಧ ಐರಿಶ್ ತಂಡವು ಅಮೋಘ ಹೋರಾಟವನ್ನು ನೀಡಲು ಸಾಧ್ಯವಾಗದೆ, ಎಂಟು ವಿಕೆಟ್‌ಗಳಿಂದ ಸೋಲು ಕಂಡಿತ್ತು.
ಇನ್ನು ಉಭಯ ತಂಡಗಳ ನಡುವೆ ಈ ಹಿಂದೆ ನಡೆದಿದ್ದ 2 ಪಂದ್ಯಗಳ ಟಿ20 ಸರಣಿಯ ಎರಡು ಪಂದ್ಯವನ್ನು ಭಾರತ ಕ್ರಮವಾಗಿ 76 ಮತ್ತು 143 ರನ್‌ಗಳಿಂದ ಗೆಲುವು ಸಾಧಿಸಿತ್ತು.
ತವರಿನಲ್ಲಿಯೂ ಐರ್ಲೆಂಡ್ ತಂಡದ ದಾಖಲೆ ಕಳಪೆಯಾಗಿದ್ದು, ತವರಿನಲ್ಲಿ ಆಡಿದ 43 ಪಂದ್ಯಗಳಲ್ಲಿ ಕೇವಲ 13 ಪಂದ್ಯಗಳಲ್ಲಿ ಐರ್ಲೆಂಡ್ ಜಯಗಳಿಸಿದ್ದು, 3 ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ.
Published On - 2:02 pm, Thu, 17 August 23