
ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ 17 ಸದಸ್ಯರ ಟೀಂ ಇಂಡಿಯಾವನ್ನು ಶುಕ್ರವಾರ (ಜೂನ್ 23) ಪ್ರಕಟಿಸಲಾಗಿದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಡಬ್ಲ್ಯುಟಿಸಿ ಫೈನಲ್‌ಗಳಲ್ಲಿ ಸೋತ ನಂತರ ಭಾರತ ಇದೀಗ ವಿಂಡೀಸ್ ವಿರುದ್ಧ 3ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭಿಸಲಿದೆ.

ಭವಿಷ್ಯದ ಟೆಸ್ಟ್ ತಂಡವನ್ನು ಕಟ್ಟುವ ಸಲುವಾಗಿ ಟೀಂ ಇಂಡಿಯಾದಲ್ಲಿ ಆಯ್ಕೆ ಮಂಡಳಿ ಹಲವು ಹೊಸ ಮುಖಗಳಿಗೆ ಅವಕಾಶ ನೀಡಿದೆ. ಅವರಲ್ಲಿ ಯುವ ಆಟಗಾರರಾದ ರುತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್, ನವದೀಪ್ ಸೈನಿ ಮತ್ತು ಮುಖೇಶ್ ಕುಮಾರ್ ಸೇರಿದ್ದಾರೆ. ಆದರೆ ಇವರೊಂದಿಗೆ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದೆ ಈ ಮೂವರು ಆಟಗಾರರಿಗೆ ನಿರಾಸೆಯಾಗಿದೆ. ಹಾಗಿದ್ದರೆ ಯಾರು ಆ 3 ಆಟಗಾರರು ಎಂಬುದನ್ನು ನೋಡುವುದಾದರೆ..

1. ಸರ್ಫರಾಜ್ ಖಾನ್: ಕಳೆದ ಕೆಲವು ವರ್ಷಗಳಿಂದ ಸರ್ಫರಾಜ್ ಖಾನ್ ಟೀಂ ಇಂಡಿಯಾದ ಬಾಗಿಲನ್ನು ಬಡಿಯುತ್ತಿದ್ದಾರೆ. ಆದರೆ ಇದುವರೆಗೂ ಆಯ್ಕೆ ಮಂಡಳಿ ಅವರತ್ತ ತಿರುಗಿ ನೋಡಿಲ್ಲ. ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಕೇವಲ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 556 ರನ್ ಬಾರಿಸಿದ್ದ ಸರ್ಫರಾಜ್ ಮೂರು ಶತಕಗಳು ಮತ್ತು ಒಂದು ಅರ್ಧಶತಕದೊಂದಿಗೆ 92.66 ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದರು. ಹೀಗಾಗಿ ಸರ್ಫರಾಜ್ಗೆ ಟೆಸ್ಟ್ ತಂಡದಲ್ಲಿ ಅವಕಾಶ ಸಿಗಲಿದೆ ಎನ್ನಲಾಗಿತ್ತು. ಆದರೆ ಆಯ್ಕೆ ಮಂಡಳಿ ಈ ಪ್ರವಾಸದಿಂದಲೂ ಅವರನ್ನು ಸೈಡ್‌ಲೈನ್ ಮಾಡಿದೆ.

2. ಮಯಾಂಕ್ ಅಗರ್ವಾಲ್: ಮೊದಲ ಡಬ್ಲ್ಯುಟಿಸಿಯಲ್ಲಿ ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿದ್ದ ಮಯಾಂಕ್, ಆ ಬಳಿಕ ಕಳಪೆ ಫಾರ್ಮ್ನಿಂದಾಗಿ ತಂಡದಿಂದ ಹೊರಬಿದ್ದಿದ್ದರು. ಆದರೆ ಕಳೆದ ರಣಜಿ ಟ್ರೋಫಿ ಸೀಸನ್ನಲ್ಲಿ ಅಬ್ಬರಿಸಿದ್ದ ಮಯಾಂಕ್ ಮೂರು ಶತಕಗಳು ಮತ್ತು 6 ಅರ್ಧ ಶತಕಗಳು ಸೇರಿದಂತೆ 82.5 ರ ಸರಾಸರಿಯಲ್ಲಿ 990 ರನ್ ಕಲೆ ಹಾಕಿದ್ದರು.

ಅಲ್ಲದೆ ಈ ಹಿಂದೆ ಟೀಂ ಇಂಡಿಯಾ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದ ಮಯಾಂಕ್ 21 ಟೆಸ್ಟ್ ಪಂದ್ಯಗಳಲ್ಲಿ 1488 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ದ್ವಿಶತಕಗಳು ಸೇರಿದ್ದೂ, ಮಯಾಂಕ್ 41.88 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಆದರೆ ದುರದೃಷ್ಟವಶಾತ್, ಅಗರ್ವಾಲ್‌ಗೆ ತಂಡದಲ್ಲಿ ಅವಕಾಶ ನೀಡಲಾಗಿಲ್ಲ.

3. ಅಭಿಮನ್ಯು ಈಶ್ವರನ್: ಬಂಗಾಳದ ಅಭಿಮನ್ಯು ಈಶ್ವರನ್ ಕೂಡ ರಣಜಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರೂ ಮತ್ತೊಮ್ಮೆ ಅವರನ್ನು ತಂಡದಲ್ಲಿ ಆಯ್ಕೆ ಮಾಡಲಾಗಿಲ್ಲ. ಕಳೆದ ರಣಜಿ ಟ್ರೋಫಿಯ14 ಇನ್ನಿಂಗ್ಸ್‌ಗಳಲ್ಲಿ ಅಭಿಮನ್ಯು 66.50 ಸರಾಸರಿಯಲ್ಲಿ ಮೂರು ಶತಕಗಳು ಮತ್ತು ಅರ್ಧ ಶತಕಗಳೊಂದಿಗೆ 798 ರನ್ ಕಲೆಹಾಕಿದ್ದರು. ಹಾಗೆಯೇ 87 ಪ್ರಥಮ ದರ್ಜೆ ಪಂದ್ಯಗಳಲ್ಲಿ 47.85 ರ ಸರಾಸರಿ ಕಲೆಹಾಕಿದ್ದಾರೆ. ಆದರೆ ಟೀಂ ಇಂಡಿಯಾದಲ್ಲಿ ಆರಂಭಿಕ ಸ್ಥಾನಕ್ಕೆ ಹಲವು ಆಯ್ಕೆಗಳಿರುವುದರಿಂದ ಅಭಿಮನ್ಯು ಅವರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುತ್ತಿಲ್ಲ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕಟ್, ನವದೀಪ್ ಸೈನಿ.