Updated on: Feb 25, 2023 | 10:58 PM
ಭಾರತ-ಆಸ್ಟ್ರೇಲಿಯಾ ನಡುವಣ 3ನೇ ಟೆಸ್ಟ್ ಪಂದ್ಯವು ಮಾರ್ಚ್ 1 ರಿಂದ ಶರುವಾಗಲಿದೆ. ಇಂದೋರ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ 3 ಲಾಭಗಳಾಗಲಿವೆ. ಅಂದರೆ ಇದು ಸರಣಿಯ ನಿರ್ಣಾಯಕ ಪಂದ್ಯ. ಈಗಾಗಲೇ 4 ಪಂದ್ಯಗಳ ಸರಣಿಯ ಮೊದಲೆರಡು ಟೆಸ್ಟ್ ಪಂದ್ಯ ಗೆದ್ದಿರುವ ಟೀಮ್ ಇಂಡಿಯಾ 2-0 ಅಂತರದಿಂದ ಮುನ್ನಡೆ ಹೊಂದಿದೆ.
ಇಂದೋರ್ ಟೆಸ್ಟ್ ಪಂದ್ಯದಲ್ಲಿ ಗೆದ್ದರೆ 3-0 ಅಂತರದಿಂದ ಟೀಮ್ ಇಂಡಿಯಾ ಸರಣಿ ವಶಕ್ಕೆ ಪಡೆಯಲಿದೆ. ಇದರ ಜೊತೆಗೆ ಟೀಮ್ ಇಂಡಿಯಾದ ಟೆಸ್ಟ್ ಶ್ರೇಯಾಂಕದಲ್ಲೂ ಬದಲಾವಣೆಯಾಗಲಿದೆ.
ಅಂದರೆ ಟೆಸ್ಟ್ ರ್ಯಾಂಕಿಂಗ್ನಲ್ಲಿ ಆಸ್ಟ್ರೇಲಿಯಾ ತಂಡವು 126 ಪಾಯಿಂಟ್ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇನ್ನು ದ್ವಿತೀಯ ಸ್ಥಾನದಲ್ಲಿರುವ ಟೀಮ್ ಇಂಡಿಯಾ 115 ಅಂಕಗಳನ್ನು ಹೊಂದಿದೆ. ಹೀಗಾಗಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಬಹುದು.
ಇನ್ನು ಇಂದೋರ್ ಟೆಸ್ಟ್ ಪಂದ್ಯದ ಗೆಲುವಿನೊಂದಿಗೆ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಎಂಟ್ರಿ ಕೊಡಲಿದೆ. ಅಂದರೆ ಭಾರತ ತಂಡವು ಆಸ್ಟ್ರೇಲಿಯಾವನ್ನು ಮೂರನೇ ಟೆಸ್ಟ್ ಪಂದ್ಯದಲ್ಲಿ ಮಣಿಸಿದರೆ ಶೇ.65 ಕ್ಕಿಂತ ಹೆಚ್ಚಿನ ಪಾಯಿಂಟ್ನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅಧಿಕೃತವಾಗಿ ನೇರ ಅರ್ಹತೆ ಪಡೆಯಲಿದೆ.
ಮತ್ತೊಂದೆಡೆ ಸರಣಿ ಉಳಿಸಿಕೊಳ್ಳಲು ಇಂದೋರ್ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ತಂಡವು ಗೆಲ್ಲಲೇಬೇಕು. ಆದರೆ ಇತ್ತ ಬಲಿಷ್ಠ ಪಡೆಯನ್ನು ಹೊಂದಿರುವ ಟೀಮ್ ಇಂಡಿಯಾ ಒಂದೇ ಏಟಿಗೆ ಮೂರು ಗುರಿಯನ್ನು ಸಾಧಿಸಲು ಪ್ಲ್ಯಾನ್ ರೂಪಿಸಿರುವುದು ವಿಶೇಷ.