ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಇಂದು ಭಾರತ ತನ್ನ ಮೊದಲ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಹಿಂದಿನ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯವನ್ನು 2-1 ಅಂತರದಿಂದ ಸೋಲಿಸಿದ ಭಾರತ ಇಂದಿನ ಪಂದ್ಯವನ್ನು ಕೂಡ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ, ಇದಕ್ಕೆ ಮಳೆ ಅಡ್ಡಿ ಪಡಿಸುವ ಸಂಭವವಿದೆ.
ಚೆನ್ನೈ ಹವಾಮಾನದಲ್ಲಿ ದಿಢೀರ್ ಬದಲಾವಣೆ ಆಗಿದ್ದು, ಅನಿರೀಕ್ಷಿತವಾಗಿದೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಇತ್ತೀಚಿನ ಹವಾಮಾನ ವರದಿಯ ಪ್ರಕಾರ, ಚೆನ್ನೈನಲ್ಲಿ ಭಾರೀ ಮಳೆಯಾಗುತ್ತಿದೆ. ಶನಿವಾರ ಮಳೆ ಬರುವ ನಿರೀಕ್ಷೆ ಇರಲಿಲ್ಲ. ಆದರೆ, ಸಂಜೆ ವೇಳೆಗೆ ಜೋರು ಮಳೆ ಬಂದಿದೆ.
ಕ್ರಿಕೆಟ್ ತಜ್ಞ ಹರ್ಷಾ ಭೋಗ್ಲೆ ಅವರು ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹವಾಮಾನ ವರದಿಯ ಬಗ್ಗೆ ಬರೆದುಕೊಂಡಿದ್ದಾರೆ. "ಚೆನ್ನೈನಲ್ಲಿ ಭಾರೀ ಮಳೆ ಬರುತ್ತಿದೆ... ತುಂಬಾ ಕತ್ತಲು ಆವರಿಸಿದೆ" ಎಂದು ಭೋಗ್ಲೆ ಬರೆದಿದ್ದಾರೆ. ಹೀಗಾಗಿ ಇಂದಿನ ಭಾರತ-ಆಸ್ಟ್ರೇಲಿಯಾ ಪಂದ್ಯ ನಡೆಯುತ್ತಾ ಅಥವಾ ಮಳೆಗೆ ಆಹುತಿ ಆಗುತ್ತಾ ಎಂಬುದು ನೋಡಬೇಕಿದೆ.
ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಹವಾಮಾನವು ಸ್ಪಷ್ಟವಾಗಿರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಳೆದ ಕೆಲವು ಗಂಟೆಗಳಲ್ಲಿ ಚೆನ್ನೈ ಮತ್ತು ತಮಿಳುನಾಡಿನಲ್ಲಿ ಹವಾಮಾನ ದಿಢೀರ್ ಬದಲಾಗಿದೆ. ಭಾನುವಾರದಂದು ಮೋಡ ಕವಿದ ವಾತಾವರಣವಿರುತ್ತದೆ, ನಗರದ ಹಲವಾರು ಭಾಗಗಳಲ್ಲಿ ಸಾಧಾರಣ ಮಳೆ ಮತ್ತು ಗುಡುಗು ಇರುತ್ತದೆ ಎಂದು ಹೇಳಲಾಗಿದೆ.
ಏತನ್ಮಧ್ಯೆ, ಸ್ಟಾರ್ ಬ್ಯಾಟರ್ ಶುಭ್ಮನ್ ಗಿಲ್ ಡೆಂಗ್ಯೂಗೆ ತುತ್ತಾದ ಪರಿಣಾಮ ಇಂದಿನ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ. ಗಿಲ್ ಬದಲಿಗೆ ಇಶಾನ್ ಕಿಶನ್ ಅವರನ್ನು ಆಡಿಸುವ ಬಗ್ಗೆ ಭಾರತ ಚಿಂತನೆ ನಡೆಸುತ್ತಿದೆ. ಅಲ್ಲದೆ, ಮೂವರು ಸ್ಪಿನ್ನರ್‌ಗಳು ಕಣಕ್ಕಿಳಿಯಲಿದ್ದಾರೆ. ಆರ್ ಅಶ್ವಿನ್ ಕೂಡ ಪ್ಲೇಯಿಂಗ್ ಇಲೆವ್ನಲ್ಲಿ ಕಾಣಿಸಿಕೊಳ್ಳಬಹುದು.
ಇತ್ತ ಆಸ್ಟ್ರೇಲಿಯಾ ಪರ ಮಾರ್ಕಸ್ ಸ್ಟೊಯಿನಿಸ್ ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ಕಾರಣ ಇಂದಿನ ಪಂದ್ಯವನ್ನು ಕಳೆದುಕೊಳ್ಳಬಹುದು. ಕ್ಯಾಮರೂನ್ ಗ್ರೀನ್ ಆಡುವ XI ನಲ್ಲಿ ಕಣಕ್ಕಿಳಿಸಬಹುದು. ಮಾರ್ನಸ್ ಲ್ಯಾಬುಸ್‌ಚಾಗ್ನೆ ಭಾರತ ವಿರುದ್ಧ ಆಡಲಿದ್ದಾರೆ ಎಂದು ಆಸೀಸ್ ಕೋಚ್ ಹೇಳಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2:00 ಗಂಟೆಗೆ ಆರಂಭವಾಗಲಿದೆ. ನೀವು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನೆಲ್‌ಗಳಲ್ಲಿ ನೇರ ಪ್ರಸಾರ ಕಾಣಲಿದೆ.