
ಛತ್ತೋಗ್ರಾಮ್ನ ಝಹೂರ್ ಅಹ್ಮದ್ ಚೌಧುರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೊಂಬಾಟ್ ಪ್ರದರ್ಶನ ತೋರುತ್ತಿದೆ. 404 ರನ್ ಗಳಿಸಿ ಬಾಂಗ್ಲಾಕ್ಕೆ ಬ್ಯಾಟಿಂಗ್ ಆಹ್ವಾನ ಮಾಡಿದ ಟೀಮ್ ಇಂಡಿಯಾ ಮಾರಕ ದಾಳಿ ಸಂಘಟಿಸಿತು. ಎರಡನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ 8 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದೆ. 271 ರನ್ಗಳ ಹಿನ್ನಡೆಯಲ್ಲಿರುವ ಬಾಂಗ್ಲಾ ಫಾಲೋಆನ್ ಭೀತಿಯಲ್ಲಿದೆ.

ಭಾರತ ಪರ ದ್ವಿತೀಯ ದಿನದಾಟ ಆರಂಭಿಸಿದ ಶ್ರೇಯಸ್ ಅಯ್ಯರ್ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. 192 ಎಸೆತಗಳಲ್ಲಿ 86 ರನ್ ಗಳಿಸಿ ಔಟಾದರು.

ಇದಕ್ಕೂ ಮುನ್ನ ಮೊದಲ ದಿನ ಶ್ರೇಯಸ್ ಅಯ್ಯರ್ ಹಾಗೂ ಚೇತೇಶ್ವರ್ ಪೂಜಾರ (90 ರನ್) ತಂಡಕ್ಕೆ ಆಧಾರವಾಗಿ 149 ರನ್ಗಳ ಜೊತೆಯಾಟ ಆಡಿದ್ದರು.

ಕುಲ್ದೀಪ್ ಯಾದವ್ ಹಾಗೂ ಆರ್. ಅಶ್ವಿನ್ ಕೂಡ 92 ರನ್ಗಳ ಕಾಣಿಕೆ ನೀಡಿ ತಂಡಕ್ಕೆ ಆಸರೆಯಾದರು. ಅಶ್ವಿನ್ 58 ರನ್ ಬಾರಿಸಿದರೆ, ಕುಲ್ದೀಪ್ 40 ರನ್ ಕಲೆಹಾಕಿದರು.

ಭಾರತ 133.5 ಓವರ್ಗಳಲ್ಲಿ 404 ರನ್ಗೆ ಆಲೌಟ್ ಆಯಿತು. ಬಾಂಗ್ಲಾದೇಶ ಪರ ತೈಜುಲ್ ಇಸ್ಲಾಂ ಹಾಗೂ ಮೆಹ್ದಿ ಹಸನ್ ತಲಾ 4 ವಿಕೆಟ್ ಪಡೆದರು.

ತನ್ನ ಮೊದಲ ಇನ್ನಿಂಗ್ಸ್ ಆಡಲು ಬಂದ ಬಾಂಗ್ಲಾದೇಶಕ್ಕೆ ಮೊದಲ ಓವರ್ನ ಮೊದಲ ಎಸೆತದಲ್ಲೇ ಮೊಹಮ್ಮದ್ ಸಿರಾಜ್ ಶಾಕ್ ನೀಡಿದರು. ಕೀಪರ್ಗೆ ಕ್ಯಾಚಿತ್ತು ನಜ್ಮುಲ್ ನಿರ್ಗಮಿಸಿದರು.

ಬ್ಯಾಟಿಂಗ್ನಲ್ಲಿ ಮೋಡಿ ಮಾಡಿದ ಕುಲ್ದೀಪ್ ಬೌಲಿಂಗ್ನಲ್ಲಿ ಅಮೋಘ ಪ್ರದರ್ಶನ ತೋರಿ ಬಾಂಗ್ಲಾದ 4 ವಿಕೆಟ್ ಕಿತ್ತು ಮಿಂಚಿದ್ದಾರೆ.

ಎರಡನೇ ದಿನದಾದ ಅಂತ್ಯಕ್ಕೆ ಬಾಂಗ್ಲಾದೇಶ 44 ಓವರ್ಗೆ 8 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿದೆ. 271 ರನ್ಗಳ ಹಿನ್ನಡೆಯಲ್ಲಿದೆ. ಭಾರತ ಪರ ಸಿರಾಜ್ 3 ವಿಕೆಟ್, ಕುಲ್ದೀಪ್ 4 ಹಾಗೂ ಉಮೇಶ್ ಯಾದವ್ 1 ವಿಕೆಟ್ ಪಡೆದುಕೊಂಡಿದ್ದಾರೆ.
Published On - 9:00 am, Fri, 16 December 22