
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಾಲ್ಕು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಇಂದು ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿಲ್ಲ. ಪವರ್ ಪ್ಲೇನಲ್ಲೇ ತಂಡ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲೂ ತಂಡದ ಆರಂಭಿಕರಿಬ್ಬರೂ ಬೇಗನೇ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಸಂಜು ಸ್ಯಾಮ್ಸನ್ ಖಾತೆ ತೆರೆಯದೆ ಔಟಾದರೆ, ಅಭಿಷೇಕ್ ಶರ್ಮಾ ಮತ್ತೊಮ್ಮೆ ವಿಫಲರಾದರು.

ಗೇಕೆಬರ್ಹಾದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಅಭಿಷೇಕ್ ಅವರ ಬ್ಯಾಟ್ ಮತ್ತೊಮ್ಮೆ ಮೌನಕ್ಕೆ ಶರಣಾಗಿದೆ. ವಾಸ್ತವವಾಗಿ ಅಭಿಷೇಕ್ ಶರ್ಮಾ ಕಳೆದ ಕೆಲವು ಪಂದ್ಯಗಳಿಂದ ಯಾವುದೇ ಉತ್ತಮ ಇನ್ನಿಂಗ್ಸ್ ಆಡಿಲ್ಲ. ಹೀಗಾಗಿ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅಭಿಷೇಕ್ ಶರ್ಮಾ ಅವರಿಂದ ಉತ್ತಮ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಆದರೆ ಇದೀಗ ಆಡಿರುವ ಎರಡೂ ಪಂದ್ಯಗಳಲ್ಲಿ ಅಭಿಷೇಕ್ ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ.

ಮೊದಲ ಪಂದ್ಯದಲ್ಲಿ ಬೇಗನೇ ಪೆವಿಲಿಯನ್ ಸೇರಿಕೊಂಡಿದ್ದ ಅಭಿಷೇಕ್, ಇದೀಗ ಎರಡನೇ ಪಂದ್ಯದಲ್ಲೂ ನಾಲ್ಕು ರನ್ ಗಳಿಸಿ ಔಟಾದರು. ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಜೆರಾಲ್ಡ್ ಕೋಟ್ಜಿ ಎಸೆತದಲ್ಲಿ ಮಾರ್ಕೊ ಯಾನ್ಸೆನ್ಗೆ ಕ್ಯಾಚಿತ್ತು ಔಟಾದರು. ಇದಕ್ಕೂ ಮುನ್ನ ಡರ್ಬನ್‌ನಲ್ಲಿ ನಡೆದ ಪಂದ್ಯದಲ್ಲಿ ಅವರು ಏಳು ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇದೀಗ ಅಭಿಷೇಕ್ರನ್ನು ತಂಡದಿಂದ ಕೈಬಿಡಬೇಕು ಎಂಬ ಕೂಗು ಜೋರಾಗಿದೆ.

ಈ ವರ್ಷದ ಜುಲೈನಲ್ಲಿ ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಅಭಿಷೇಕ್ ಅವರು ಶತಕದ ನಂತರ ಯಾವುದೇ ದೊಡ್ಡ ಇನ್ನಿಂಗ್ಸ್ ಆಡಲಿಲ್ಲ. ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಬಳಿಕ ಎರಡನೇ ಟಿ20ಯಲ್ಲಿ ಬಲಿಷ್ಠ ಬ್ಯಾಟಿಂಗ್ ಪ್ರದರ್ಶಿಸಿ 47 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಎಂಟು ಸಿಕ್ಸರ್‌ಗಳ ನೆರವಿನಿಂದ 100 ರನ್ ಗಳಿಸಿದ್ದರು. ಭಾರತ ಪರ ಇದು ಅವರ ಮೊದಲ ಶತಕವಾಗಿತ್ತು. ಈ ಇನ್ನಿಂಗ್ಸ್ ನಂತರ, ಅವರ ಬ್ಯಾಟ್‌ನಿಂದ ರನ್ ಗಳಿಸುವುದನ್ನು ಬಿಟ್ಟು, ಅವರು ವಿಕೆಟ್‌ನಲ್ಲಿ ಉಳಿಯಲು ಸಹ ಕಷ್ಟಪಡಬೇಕಾಗಿದೆ.

ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿಯೂ ಸಹ ಅಭಿಷೇಕ್ ರನ್ ಬರ ಎದುರಿಸಿದ್ದರು . ಈ ಪ್ರವಾಸದಲ್ಲಿ ಅವರು ಕೇವಲ 35 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಆದಾಗ್ಯೂ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಲಾಗುತ್ತಿದೆ. ಆದರೆ ಆಫ್ರಿಕಾ ವಿರುದ್ಧ ಆಡಿರುವ ಎರಡು ಪಂದ್ಯಗಳಲ್ಲಿ ರನ್ ಗಳಿಸಲು ವಿಫಲರಾಗಿರುವ ಅಭಿಷೇಕ್ರನ್ನು ಮುಂದಿನ ಪಂದ್ಯದಿಂದ ಕೈಬಿಡುವ ಸಾಧ್ಯತೆಗಳು ಹೆಚ್ಚಿವೆ.