
ತಿರುವನಂತಪುರಂನಲ್ಲಿ ಶ್ರೀಲಂಕಾ ವಿರುದ್ಧ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ ದಾಖಲೆಯ 221 ರನ್ ಕಲೆಹಾಕಿತು. ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಕಲೆಹಾಕಿದ ಅತ್ಯಧಿಕ ಮೊತ್ತ ಎಂಬ ದಾಖಲೆಯನ್ನು ಬರೆಯಿತು. ಟೀಂ ಇಂಡಿಯಾದ ಈ ಸಾಧನೆಗೆ ಕಾರಣವಾಗಿದ್ದು, ತಂಡದ ಆರಂಭಿಕ ಜೋಡಿ.

ಈ ಪಂದ್ಯದಲ್ಲಿ ಆರಂಭದಿಂದಲೂ ಅಬ್ಬರಿಸಿದ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಮೊದಲ ವಿಕೆಟ್‌ಗೆ ದಾಖಲೆಯ 162 ರನ್‌ಗಳ ಜೊತೆಯಾಟ ಕಟ್ಟಿದರು. ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಭಾರತದ ಆರಂಭಿಕ ಜೋಡಿ ಮೊದಲ ವಿಕೆಟ್‌ಗೆ ಕಲೆಹಾಕಿದ ಅತ್ಯಧಿಕ ರನ್‌ಗಳ ಜೊತೆಯಾಟ ಎಂಬ ದಾಖಲೆಯನ್ನು ಬರೆಯಿತು.

ಇದು ಮಾತ್ರವಲ್ಲದೆ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾಗೆ ಶತಕ ಬಾರಿಸುವ ಅವಕಾಶವಿತ್ತು ಆದರೆ ಅದು ಸಾಧ್ಯವಾಗಲಿಲ್ಲ. ಆದಾಗ್ಯೂ, ಸ್ಮೃತಿ ಮತ್ತು ಶಫಾಲಿ ವರ್ಮಾ ಅಮೋಘ ಜೊತೆಯಾಟದ ಮೂಲಕ ತಮ್ಮದೇ ಆದ ದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿದರು.

ಈ ಪಂದ್ಯದಲ್ಲಿ ಶಫಾಲಿ 46 ಎಸೆತಗಳಲ್ಲಿ 12 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 79 ರನ್ ಬಾರಿಸಿದರೆ, ಏತನ್ಮಧ್ಯೆ, ಸ್ಮೃತಿ ಮಂಧಾನ 48 ಎಸೆತಗಳಲ್ಲಿ 11 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 80 ರನ್‌ಗಳ ಇನ್ನಿಂಗ್ಸ್ ಆಡಿದರು.

ಈ ಮೂಲಕ ಇವರಿಬ್ಬರು ಮೊದಲ ವಿಕೆಟ್‌ಗೆ 162 ರನ್‌ಗಳನ್ನು ಸೇರಿಸುವ ಮೂಲಕ ತಮ್ಮ ಹಿಂದಿನ ದಾಖಲೆಯನ್ನು ಮುರಿದರು. ಈ ಪಾಲುದಾರಿಕೆಯು ಮಹಿಳಾ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಯಾವುದೇ ವಿಕೆಟ್‌ಗೆ ಭಾರತದ ಅತ್ಯಧಿಕ ಪಾಲುದಾರಿಕೆಯಾಗಿದೆ. ಇದಕ್ಕೂ ಮೊದಲು, ಇಬ್ಬರಿಬ್ಬರು 2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 142 ರನ್‌ಗಳ ಜೊತೆಯಾಟ ಕಟ್ಟಿದ್ದರು.

ಇದರ ಜೊತೆಗೆ ಮಹಿಳಾ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಜೋಡಿಗಳ ಪಟ್ಟಿಯಲ್ಲಿ ಮಂಧಾನ ಮತ್ತು ಶಫಾಲಿ ನಂ. 1 ಸ್ಥಾನವನ್ನು ಹೊಂದಿದ್ದಾರೆ. ಒಟ್ಟಾಗಿ, ಇವರಿಬ್ಬರು 3,107 ರನ್ ಕಲೆಹಾಕಿದ್ದಾರೆ. ಈ ಜೋಡಿಯ ನಂತರ ಆಸ್ಟ್ರೇಲಿಯಾದ ಅಲಿಸಾ ಹೀಲಿ ಮತ್ತು ಬೆತ್ ಮೂನಿ ತಲಾ 2,720 ರನ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.