Updated on: Sep 14, 2021 | 5:58 PM
ಐಪಿಎಲ್ನ ದ್ವಿತಿಯಾರ್ಧಕ್ಕೆ ಭಾನುವಾರ ಚಾಲನೆ ದೊರೆಯಲಿದೆ. ಟೂರ್ನಿಯ ಉಳಿದ 31 ಪಂದ್ಯಗಳನ್ನು ಯುಎಇನ ಶಾರ್ಜಾ, ಅಬುಧಾಬಿ ಹಾಗೂ ದುಬೈ ಕ್ರಿಕೆಟ್ ಮೈದಾನದಲ್ಲಿ ಆಡಲಾಗುತ್ತದೆ. ಆದರೆ ದ್ವಿತಿಯಾರ್ಧ ಆರಂಭಕ್ಕೂ ಮುನ್ನವೇ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡವನ್ನು ಹೆಸರಿಸಿದ್ದಾರೆ ಟೀಮ್ ಇಂಡಿಯಾ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್.
ಈ ಲೆಕ್ಕಾಚಾರಗಳಲ್ಲಿ ಎಂದಿನಂತೆ ಬಲಿಷ್ಠ ತಂಡವಾಗಿ ಆರ್ಸಿಬಿ ಕೂಡ ಇರುವುದು ವಿಶೇಷ. ಒಂದು ವೇಳೆ ಈ ಸಲ ಆರ್ಸಿಬಿ ಕಪ್ ಗೆದ್ದರೆ ಇಬ್ಬರು ಲೆಜೆಂಡ್ ಆಟಗಾರರ 13 ವರ್ಷಗಳ ದೀರ್ಘ ಕಾಯುವಿಕೆಗೆ ಫುಲ್ ಸ್ಟಾಪ್ ಬೀಳಲಿದೆ. ಹೌದು, ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. 6076 ರನ್ ಗಳಿಸಿರುವ ಕೊಹ್ಲಿ ಐಪಿಎಲ್‌ನಲ್ಲಿ 5 ಶತಕ ಮತ್ತು 40 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇದಾಗ್ಯೂ ಒಂದೇ ಒಂದು ಬಾರಿ ಕಪ್ ಗೆದ್ದ ತಂಡದ ಭಾಗವಾಗಲು ಸಾಧ್ಯವಾಗಿಲ್ಲ.
ಇನ್ನು ಆರ್ಸಿಬಿ ತಂಡದ ಆಪತ್ಭಾಂಧವ ಎಬಿ ಡಿವಿಲಿಯರ್ಸ್ ಐಪಿಎಲ್‌ನಲ್ಲಿ 5056 ರನ್ ಗಳಿಸಿದ್ದಾರೆ. ಹಲವು ಪಂದ್ಯಗಳನ್ನೂ ಸಹ ಗೆಲ್ಲಿಸಿಕೊಟ್ಟಿದ್ದಾರೆ. ಇದಾಗ್ಯೂ ಐಪಿಎಲ್ ಟ್ರೋಫಿ ಎನ್ನುವುದು ಎಬಿಡಿಗೆ ಮರೀಚಿಕೆ. ಹಾಗೆಯೇ ಪಂಜಾಬ್ ಕಿಂಗ್ಸ್ ತಂಡ ಆಟಗಾರ ಕ್ರಿಸ್ ಗೇಲ್ 4950 ರನ್ ಗಳಿಸಿದ್ದಾರೆ. ಕೆಕೆಆರ್, ಆರ್ಸಿಬಿ ಸೇರಿದಂತೆ ಮೂರು ಫ್ರಾಂಚೈಸಿಗಳ ಪರ ಆಡಿರುವ ಗೇಲ್ ಕೂಡ ಇದುವರೆಗೆ ಐಪಿಎಲ್ ಟ್ರೋಫಿ ಗೆದ್ದ ತಂಡದ ಭಾಗವಾಗಿಲ್ಲ ಎಂಬುದು ವಿಶೇಷ.
ಇದಾಗ್ಯೂ ಪಾಕಿಸ್ತಾನ್ ತಂಡದ ಕೆಲ ಆಟಗಾರರಿಗೆ ಐಪಿಎಲ್ ಟ್ರೋಫಿ ಗೆದ್ದ ತಂಡಗಳ ಭಾಗವಾಗುವ ಅವಕಾಶ ಲಭಿಸಿದೆ. 2008 ರಲ್ಲಿ ಪಾಕ್ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸಿದ್ದರು. ಚೊಚ್ಚಲ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ವೇಳೆ ತಂಡದಲ್ಲಿ ಪಾಕ್ ಎಡಗೈ ವೇಗದ ಬೌಲರ್ ಸೊಹೈಲ್ ತನ್ವಿರ್, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕಮ್ರಾನ್ ಅಕ್ಮಲ್ ಮತ್ತು ಯೂನಿಸ್ ಖಾನ್ ಚಾಂಪಿಯನ್ ತಂಡದ ಭಾಗವಾಗಿದ್ದರು.
ಅಷ್ಟೇ ಅಲ್ಲದೆ ಚೊಚ್ಚಲ ಟೂರ್ನಿಯಲ್ಲಿ 11 ಪಂದ್ಯಗಳಿಂದ 22 ವಿಕೆಟ್ ಪಡೆದು ಸೊಹೈಲ್ ತನ್ವೀರ್ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. 2008ರ ಉಗ್ರರ ಮುಂಬೈ ದಾಳಿ ಬಳಿಕ ಪಾಕ್ ಆಟಗಾರರನ್ನು ಐಪಿಎಲ್ನಿಂದ ಕೈ ಬಿಡಲು ಭಾರತ ಸರ್ಕಾರ ನಿರ್ದೇಶಿಸಿತ್ತು. ಅದರಂತೆ ಕಳೆದ 13 ಸೀಸನ್ಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾಕ್ ಆಟಗಾರರಿಗೆ ನಿಷೇಧ ಹೇರಲಾಗಿದೆ.