
ಐಪಿಎಲ್ (Indian Premier League) ಸೀಸನ್ 15 ಮೆಗಾ ಹರಾಜಿಗೆ ಆಟಗಾರರ ಶಾರ್ಟ್ ಲೀಸ್ಟ್ ಮಾಡಲಾಗಿದೆ. ಅದರಂತೆ ಈ ಹಿಂದೆ ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದ 1214 ಆಟಗಾರರಿಂದ ಅಂತಿಮ ಪಟ್ಟಿಗೆ 590 ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಈ ಪಟ್ಟಿಯಲ್ಲಿ 370 ಭಾರತೀಯ ಕ್ರಿಕೆಟಿಗರಿದ್ದರೆ, 220 ವಿದೇಶಿ ಆಟಗಾರರು ಇದ್ದಾರೆ. ಇನ್ನು 220 ವಿದೇಶಿ ಆಟಗಾರರಲ್ಲಿ ಅತೀ ಹೆಚ್ಚು ಸ್ಥಾನ ಪಡೆದಿರುವುದು ಆಸ್ಟ್ರೇಲಿಯಾ ಆಟಗಾರರು. ಆಸ್ಟ್ರೇಲಿಯಾದ 47 ಆಟಗಾರರು ಈ ಪಟ್ಟಿಯಲ್ಲಿದ್ದಾರೆ. ಹಾಗೆಯೇ ವೆಸ್ಟ್ ಇಂಡೀಸ್ನ 34 ಆಟಗಾರರು, ಸೌತ್ ಆಫ್ರಿಕಾದ 33 ಆಟಗಾರರು ಮೆಗಾ ಹರಾಜು ಪಟ್ಟಿಯಲ್ಲಿದ್ದಾರೆ.

ಹಾಗೆಯೇ ಇಂಗ್ಲೆಂಡ್ನ 24 ಆಟಗಾರರು, ನ್ಯೂಜಿಲೆಂಡ್ನ 24 ಆಟಗಾರರು, ಶ್ರೀಲಂಕಾದ 23 ಆಟಗಾರರು, ಅಫ್ಘಾನಿಸ್ತಾನದ 17 ಆಟಗಾರರು, ಬಾಂಗ್ಲಾದೇಶದ 5 ಆಟಗಾರರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಐರ್ಲೆಂಡ್ನ 5 ಆಟಗಾರರು, ನಮೀಬಿಯಾದ 3 ಆಟಗಾರರು, ಸ್ಕಾಟ್ಲೆಂಡ್ನ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ. ಹಾಗೆಯೇ ಯುಎಸ್ಎ, ನೇಪಾಳ, ಜಿಂಬಾಬ್ವೆಯಿಂದ ಒಬ್ಬೊಬ್ಬ ಆಟಗಾರರು ಮೆಗಾ ಹರಾಜು ಪಟ್ಟಿಯ ಅಂತಿಮ ಲೀಸ್ಟ್ನಲ್ಲಿದ್ದಾರೆ.

ವಿಶೇಷ ಎಂದರೆ ಈ ಪಟ್ಟಿಯಲ್ಲಿ ಪಾಕಿಸ್ತಾನ್ ಮೂಲದ ಮೂವರು ಆಟಗಾರರು ಕೂಡ ಸ್ಥಾನ ಪಡೆದಿದ್ದಾರೆ. ಈ ಹಿಂದೆ 2008 ರಲ್ಲಿ ಪಾಕ್ ಆಟಗಾರರು ಐಪಿಎಲ್ನಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ಪಾಕ್ ಆಟಗಾರರನ್ನು ಐಪಿಎಲ್ನಿಂದ ಬ್ಯಾನ್ ಮಾಡಲಾಗಿತ್ತು. ಇದಾಗ್ಯೂ ಪಾಕ್ ಮೂಲದ ಕೆಲ ಆಟಗಾರರು ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಕೂಡ ಪಾಕ್ ಮೂಲದ ಮೂವರು ಆಟಗಾರರು ಮೆಗಾ ಹರಾಜಿನಲ್ಲಿದ್ದಾರೆ. ಈ ಆಟಗಾರರ ಬಗೆಗಿನ ಮಾಹಿತಿ ಇಲ್ಲಿದೆ.

ಇಮ್ರಾನ್ ತಾಹಿರ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿರುವ ಅನುಭವಿ ಸ್ಪಿನ್ನರ್ ಇಮ್ರಾನ್ ತಾಹಿರ್ ಈ ಬಾರಿ ಕೂಡ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಪಾಕ್ ಮೂಲದವರಾಗಿರುವ ಇಮ್ರಾನ್ ತಾಹಿರ್ ತಮ್ಮ ಕ್ರಿಕೆಟ್ ಕೆರಿಯರ್ ಕಂಡುಕೊಂಡಿದ್ದು ಸೌತ್ ಆಫ್ರಿಕಾ ಪರ. ಹೀಗಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆಯ ಆಟಗಾರನಾಗಿ ತಾಹಿರ್ ಐಪಿಎಲ್ನಲ್ಲಿ ಸಿಎಸ್ಕೆ, ಡೆಲ್ಲಿ ತಂಡಗಳ ಪರ ಕಾಣಿಸಿಕೊಂಡಿದ್ದಾರೆ. ಈ ಬಾರಿ ಕೂಡ ಮೆಗಾ ಹರಾಜಿನಲ್ಲಿದ್ದು, 42 ವರ್ಷದ ತಾಹಿರ್ ಹರಾಜಾಗಲಿದ್ದಾರಾ ಕಾದು ನೋಡಬೇಕಿದೆ.

ಉಸ್ಮಾನ್ ಖ್ವಜಾ: ಪಾಕಿಸ್ತಾನ್ ಮೂಲದ ಉಸ್ಮಾನ್ ಖ್ವಾಜಾ ಪ್ರಸ್ತುತ ಆಸ್ಟ್ರೇಲಿಯಾ ತಂಡದ ಆಟಗಾರ. ಈ ಹಿಂದೆ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡಿದ್ದ ಖ್ವಾಜಾ ಈ ಬಾರಿ ಮೆಗಾ ಹರಾಜಿನಲ್ಲಿ ಹೆಸರು ನೀಡಿದ್ದಾರೆ.

ಅಲಿ ಖಾನ್: ಅಮೆರಿಕ ತಂಡದ ಆಟಗಾರನಾಗಿರುವ ಅಲಿ ಖಾನ್ ಕೂಡ ಪಾಕ್ ಮೂಲದ ಕ್ರಿಕೆಟಿಗ. 2020ರಲ್ಲಿ ಕೆಕೆಆರ್ ತಂಡದಲ್ಲಿ ಬದಲಿ ಆಟಗಾರನಾಗಿ ಅಲಿ ಖಾನ್ ಕಾಣಿಸಿಕೊಂಡಿದ್ದರು. ಇದಾಗ್ಯೂ ಗಾಯದ ಕಾರಣ ಅರ್ಧದಲ್ಲೇ ಟೂರ್ನಿ ತೊರೆದಿದ್ದರು. ಇದೀಗ ಅಮೆರಿಕ ತಂಡದ ವೇಗಿ ಅಲಿ ಖಾನ್ ಐಪಿಎಲ್ ಮೆಗಾ ಹರಾಜು ಪಟ್ಟಿಯಲ್ಲಿದ್ದಾರೆ.