
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15ರ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಸುಳಿವು ನೀಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ನಡೆದ ರಿಟೈನ್ ಪ್ರಕ್ರಿಯೆಯ ವೇಳೆ ಡೇವಿಡ್ ವಾರ್ನರ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ತಂಡವು ಬಿಡುಗಡೆ ಮಾಡಿತ್ತು.

ಹೀಗಾಗಿ ಈ ಬಾರಿ ಹರಾಜಿನಲ್ಲಿ ವಾರ್ನರ್ ಕಾಣಿಸಿಕೊಳ್ಳುವುದು ಕೂಡ ಖಚಿತವಾಗಿತ್ತು. ಇದಾಗ್ಯೂ ಮೆಗಾ ಹರಾಜಿಗೂ ಮುನ್ನವೇ ಹೊಸ ಎರಡು ಫ್ರಾಂಚೈಸಿಗಳಿಗೆ ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡುವ ಅವಕಾಶವಿದೆ. ಹೀಗಾಗಿ ಮೆಗಾ ಹರಾಜಿಗೂ ಮುನ್ನವೇ ವಾರ್ನರ್ ಲಕ್ನೋ ಅಥವಾ ಅಹಮದಾಬಾದ್ ಫ್ರಾಂಚೈಸಿಯ ಪಾಲಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಭಿಮಾನಿಯೊಬ್ಬರು ಮುಂದಿನ ನಡೆಯೇನು ಎಂದು ವಾರ್ನರ್ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ವಾರ್ನರ್, ಹರಾಜಿನಲ್ಲಿ ಕಾಣಿಸಿಕೊಳ್ಳುವ ಸುಳಿವು ನೀಡಿದ್ದಾರೆ. ಅಂದರೆ ಇದುವರೆಗೆ ಡೇವಿಡ್ ವಾರ್ನರ್ ಅವರನ್ನು ಎರಡು ಹೊಸ ಫ್ರಾಂಚೈಸಿಗಳು ಆಯ್ಕೆ ಮಾಡಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ.

ಅದರಂತೆ ಮುಂದಿನ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಡೇವಿಡ್ ವಾರ್ನರ್. ಇದಾಗ್ಯೂ ಹೊಸ ಎರಡು ಫ್ರಾಂಚೈಸಿಗಳಿಗೆ ತಲಾ ಮೂವರು ಆಟಗಾರರನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲು ಇನ್ನೂ ಕೂಡ ಎರಡು ವಾರಗಳ ಸಮಯವಕಾಶವಿದೆ. ಇದರ ನಡುವೆ ವಾರ್ನರ್ ಅವರು ಹೊಸ ತಂಡಗಳ ಪಾಲಾದರೂ ಅಚ್ಚರಿಪಡಬೇಕಿಲ್ಲ.

ಸದ್ಯದ ಮಾಹಿತಿ ಪ್ರಕಾರ, ಇದುವರೆಗೆ ಡೇವಿಡ್ ವಾರ್ನರ್ ಯಾವುದೇ ಹೊಸ ಫ್ರಾಂಚೈಸಿ ಜೊತೆ ಒಪ್ಪಂದ ಮಾಡಿಕೊಳ್ಳದ ಕಾರಣ, ಅವರು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದೇ ಹೇಳಬಹುದು.

ಐಪಿಎಲ್ ಇತಿಹಾಸ ಅತ್ಯಂತ ಯಶಸ್ವಿ ವಿದೇಶಿ ಆಟಗಾರನಾಗಿ ಗುರುತಿಸಿಕೊಂಡಿರುವ ವಾರ್ನರ್, ಇದುವರೆಗೆ 150 ಪಂದ್ಯಗಳಿಂದ 5449 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲದೆ ಐಪಿಎಲ್ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ವಿದೇಶಿ ಬ್ಯಾಟರ್ ಎಂಬ ದಾಖಲೆ ವಾರ್ನರ್ ಹೆಸರಿನಲ್ಲಿದೆ.