
IPL 2023 Auction: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಗಾಗಿ ಬಿಸಿಸಿಐ ಭರ್ಜರಿ ಸಿದ್ಧತೆಯಲ್ಲಿದೆ. ಈಗಾಗಲೇ ಐಪಿಎಲ್ ಮಿನಿ ಹರಾಜಿಗಾಗಿ ದಿನಾಂಕ ಫಿಕ್ಸ್ ಮಾಡಲಾಗಿದ್ದು, ಅದರಂತೆ ಡಿಸೆಂಬರ್ 23 ರಂದು ಕೊಚ್ಚಿನ್ನಲ್ಲಿ ಆಟಗಾರರ ಬಿಡ್ಡಿಂಗ್ ನಡೆಯಲಿದೆ.

ಅದಕ್ಕೂ ಮುನ್ನ ಈ ಹರಾಜಿಗಾಗಿ ಹೆಸರು ನೋಂದಣಿ ಮಾಡಿಕೊಳ್ಳಲು ಬಿಸಿಸಿಐ ಆಟಗಾರರಿಗೆ ಗಡುವು ವಿಧಿಸಿದೆ. ಅದರಂತೆ ಡಿಸೆಂಬರ್ 15, ಸಂಜೆ 5 ಗಂಟೆಯೊಳಗೆ ಆಸಕ್ತ ಆಟಗಾರರು ಹೆಸರು ರಿಜಿಸ್ಟರ್ ಮಾಡಿಕೊಳ್ಳಲು ಬಿಸಿಸಿಐ ಸೂಚಿಸಿದೆ.

ಡಿಸೆಂಬರ್ 15 ಕೊನೆಯ ದಿನಾಂಕವಾಗಿದ್ದು, ಆ ಬಳಿಕ ಹೆಸರು ನೀಡುವ ಆಟಗಾರರನ್ನು ಹರಾಜಿಗಾಗಿ ಪರಿಗಣಿಸಲಾಗುವುದಿಲ್ಲ. ಹೀಗಾಗಿ ಮುಂದಿನ ತಿಂಗಳ 15 ರೊಳಗೆ ಎಲ್ಲಾ ಆಟಗಾರರು ಮಿನಿ ಹರಾಜಿಗಾಗಿ ಹೆಸರು ನೀಡುವ ನಿರೀಕ್ಷೆಯಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಮಿನಿ ಹರಾಜಿಗಾಗಿ ಹೆಸರು ನೋಂದಣಿ ದಿನಾಂಕ ಫಿಕ್ಸ್ ಆಗುತ್ತಿದ್ದಂತೆ, ಅತ್ತ ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋನ್ಸ್ ಹಾಗೂ ಜೋ ರೂಟ್ ತಮ್ಮ ಹೆಸರುಗಳನ್ನು ರಿಜಿಸ್ಟರ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಾರಿ ಸುಮಾರು 250 ಆಟಗಾರರು ಹೆಸರು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆಯಿದೆ. ಅವರಲ್ಲಿ ಕೆಲವೇ ಕೆಲವು ಆಟಗಾರರಿಗೆ ಮಾತ್ರ ಅವಕಾಶ ಸಿಗಲಿದೆ. ಏಕೆಂದರೆ ಈ ಬಾರಿ ಮಿನಿ ಹರಾಜು ನಡೆಯಲಿದ್ದು, ಹೀಗಾಗಿ ಆಯಾ ತಂಡಗಳಲ್ಲಿ ಖಾಲಿ ಇರುವ ಸ್ಥಾನಗಳಿಗಾಗಿ ಬಿಡ್ಡಿಂಗ್ ಜರುಗಲಿದೆ.

ಇನ್ನು ಈ ಬಾರಿಯ ಮಿನಿ ಹರಾಜಿನಲ್ಲಿ ಸ್ಟಾರ್ ಆಟಗಾರರಾಗಿ ಇಂಗ್ಲೆಂಡ್ನ ಬೆನ್ ಸ್ಟೋಕ್ಸ್, ಸ್ಯಾಮ್ ಕರನ್, ಜೋ ರೂಟ್ ಹಾಗೂ ಆಸ್ಟ್ರೇಲಿಯಾದ ಯುವ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಹೆಸರುಗಳು ಕಾಣಿಸಿಕೊಳ್ಳಲಿವೆ.

ಡಿಸೆಂಬರ್ 23 ರಂದು ಒಟ್ಟು ಮೊತ್ತ 95 ಕೋಟಿ ರೂ. ನಲ್ಲಿ ಆಯಾ ಫ್ರಾಂಚೈಸಿ ಬಳಿ ಉಳಿದಿರುವ ಮೊತ್ತದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಅದರಂತೆ ಯಾವ ತಂಡಕ್ಕೆ ಯಾರು ಸೇರ್ಪಡೆಯಾಗಲಿದ್ದಾರೆ ಕಾದು ನೋಡಬೇಕಿದೆ.