Updated on: Apr 09, 2023 | 7:23 PM
IPL 2023: ಐಪಿಎಲ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಬಗ್ಗು ಬಡಿದು ಶುಭಾರಂಭ ಮಾಡಿದ್ದ ಆರ್ಸಿಬಿ (RCB) ತಂಡವು 2ನೇ ಪಂದ್ಯದಲ್ಲಿ ಕೆಕೆಆರ್ (KKR) ವಿರುದ್ಧ ಹೀನಾಯವಾಗಿ ಸೋಲನುಭವಿಸಿತ್ತು. ಈ ಸೋಲಿನ ಬೆನ್ನಲ್ಲೇ ಆರ್ಸಿಬಿ ತಂಡದಲ್ಲೂ 2 ಮಹತ್ವದ ಬದಲಾವಣೆಗಳಾಗಿವೆ.
ತಂಡದಲ್ಲಿದ್ದ ಪ್ರಮುಖ ವೇಗಿ ರೀಸ್ ಟೋಪ್ಲಿ ಗಾಯಗೊಂಡು ಐಪಿಎಲ್ನಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಆರ್ಸಿಬಿ ಫ್ರಾಂಚೈಸಿ ಬದಲಿ ಆಟಗಾರನಾಗಿ ಸೌತ್ ಆಫ್ರಿಕಾ ವೇಗಿ ವೇಯ್ನ್ ಪಾರ್ನೆಲ್ ಅವರನ್ನು ಆಯ್ಕೆ ಮಾಡಿಕೊಂಡಿದೆ.
ಹಾಗೆಯೇ ಪಾದದ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಮಧ್ಯಮ ಕ್ರಮಾಂಕದ ಬ್ಯಾಟರ್ ರಜತ್ ಪಾಟಿದಾರ್ ಕೂಡ ಟೂರ್ನಿಯಿಂದ ಹೊರಗುಳಿದಿದ್ದಾರೆ. ಆದರೆ ಇಲ್ಲಿ ಆರ್ಸಿಬಿ ಮತ್ತೋರ್ವ ಬ್ಯಾಟರ್ನನ್ನು ಆಯ್ಕೆ ಮಾಡುವ ಬದಲು ಬೌಲರ್ನನ್ನು ಆಯ್ಕೆ ಮಾಡಿರುವುದು ವಿಶೇಷ.
ಅಂದರೆ ರಜತ್ ಪಾಟಿದಾರ್ ಬದಲಿಗೆ ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿರುವುದು ಕರ್ನಾಟಕದ ವೇಗಿ ವೈಶಾಖ್ ವಿಜಯಕುಮಾರ್. ಆರ್ಸಿಬಿ ಇಂತಹದೊಂದು ಮಹತ್ವದ ಬದಲಾವಣೆ ಮಾಡಿಕೊಳ್ಳಲು ಮುಖ್ಯ ಕಾರಣ ಪ್ರಸ್ತುತ ತಂಡದ ಬೌಲಿಂಗ್ ಲೈನಪ್.
ಆರ್ಸಿಬಿ ತಂಡವು ಮೊದಲ ಪಂದ್ಯದಲ್ಲಿ ಜಯ ಸಾಧಿಸಿದರೂ ಬೌಲರ್ಗಳಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಮೂಡಿಬಂದಿರಲಿಲ್ಲ. ಇದಕ್ಕೆ ಸಾಕ್ಷಿಯೇ 48 ರನ್ಗೆ 4 ವಿಕೆಟ್ ಕಳೆದುಕೊಂಡ ಮುಂಬೈ ಇಂಡಿಯನ್ಸ್ ಆ ಬಳಿಕ 7 ವಿಕೆಟ್ ನಷ್ಟಕ್ಕೆ 171 ರನ್ ಪೇರಿಸಿರುವುದು.
ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲೂ ಇದೇ ಕಥೆ. 47 ರನ್ಗೆ 3 ವಿಕೆಟ್ ಕಬಳಿಸಿದ ಆರ್ಸಿಬಿ ಬೌಲರ್ಗಳು ಆ ಬಳಿಕ ದುಬಾರಿಯಾದರು. ಪರಿಣಾಮ ಕೆಕೆಆರ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 204 ರನ್ ಕಲೆಹಾಕಿತು. ಇದೀಗ ತಂಡದ ಬೌಲಿಂಗ್ ಲೈನಪ್ ಆರ್ಸಿಬಿಯ ಚಿಂತೆಯನ್ನು ಹೆಚ್ಚಿಸಿದೆ.
ಅದರಲ್ಲೂ ಆಕಾಶ್ ದೀಪ್ ಹಾಗೂ ಹರ್ಷಲ್ ಪಟೇಲ್ ಮೊನಚಿಲ್ಲದ ದಾಳಿ ಸಂಘಟಿಸುತ್ತಿದ್ದಾರೆ. ಇನ್ನು ಮೊದಲ ಪಂದ್ಯದಲ್ಲಿ ಮಿಂಚಿದ ಮೊಹಮ್ಮದ್ ಸಿರಾಜ್ 2ನೇ ಪಂದ್ಯದಲ್ಲಿ ದುಬಾರಿಯಾಗಿದ್ದರು. ಹೀಗಾಗಿಯೇ ಆರ್ಸಿಬಿ ಫ್ರಾಂಚೈಸಿಯು ರಜತ್ ಪಾಟಿದಾರ್ ಬದಲಿಗೆ ಕರ್ನಾಟಕದ ವೇಗಿಯನ್ನು ಆಯ್ಕೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ.
ಇದಕ್ಕೆ ಮುಖ್ಯ ಕಾರಣ ಆರ್ಸಿಬಿ ತಂಡವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ನೂ 6 ಪಂದ್ಯಗಳನ್ನಾಡಬೇಕಿದೆ. ಇದೇ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಹರ್ಷಲ್ ಪಟೇಲ್ ಹಾಗೂ ಆಕಾಶ್ ದೀಪ್ ಹೆಚ್ಚಿನ ರನ್ ಬಿಟ್ಟುಕೊಟ್ಟಿದ್ದರು. ಇದೀಗ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಕನ್ನಡಿಗನನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ.
ಅಂದರೆ ಇಲ್ಲಿ ವೈಶಾಖ್ ವಿಜಯಕುಮಾರ್ ಅವರಿಗೆ ಚಿನ್ನಸ್ವಾಮಿ ಸ್ಟೇಡಿಯಂ ತವರು ಮೈದಾನ. ಇಲ್ಲೇ ಕ್ರಿಕೆಟ್ ಕೆರಿಯರ್ ಆರಂಭಿಸಿರುವ ಕನ್ನಡಿಗನಿಗೆ ಬೆಂಗಳೂರು ಪಿಚ್ನ ಸ್ಥಿತಿಗತಿಗಳ ಬಗ್ಗೆ ಹೆಚ್ಚಿನ ಅರಿವಿದೆ. ಹೀಗಾಗಿ ರಜತ್ ಪಾಟಿದಾರ್ ಬದಲಿಗೆ ಬ್ಯಾಟರ್ನನ್ನು ಆಯ್ಕೆ ಮಾಡುವ ಬದಲು ಆರ್ಸಿಬಿ ಫ್ರಾಂಚೈಸಿ ಕರ್ನಾಟಕದ ಬೌಲರ್ಗೆ ಮಣೆ ಹಾಕಿದೆ.
ಹೀಗಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಮುಂಬರುವ ಪಂದ್ಯಗಳಲ್ಲಿ ಆಕಾಶ್ ದೀಪ್ ಬದಲಿಗೆ ವೈಶಾಖ್ ವಿಜಯಕುಮಾರ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಈ ಮೂಲಕ ಚಿನ್ನಸ್ವಾಮಿ ಪಿಚ್ನಲ್ಲಿ ಕನ್ನಡಿಗನ ವೇಗದ ಅಸ್ತ್ರವನ್ನು ಬಳಸಿ ಜಯ ಸಾಧಿಸಲು ಆರ್ಸಿಬಿ ತಂಡ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಈ ಪ್ಲ್ಯಾನ್ ವರ್ಕ್ ಆಗಲಿದೆಯಾ ಎಂಬುದು ಮುಂದಿನ ಪಂದ್ಯಗಳಲ್ಲಿ ಗೊತ್ತಾಗಲಿದೆ.
RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್ವೆಲ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವಿಜಯಕುಮಾರ್ ವೈಶಾಖ್.