Updated on: May 03, 2023 | 3:02 PM
IPL 2023: RCB ವಿರುದ್ಧದ ಹೀನಾಯ ಸೋಲಿನ ಹತಾಶೆಯಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ನಾಯಕ ಕೆಎಲ್ ರಾಹುಲ್ ಮುಂಬರುವ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ. ಈಗಾಗಲೇ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕೆಎಲ್ಆರ್ ತೊರೆಯಲು ನಿರ್ಧರಿಸಿದ್ದು, ಮುಂಬೈಗೆ ತೆರಳಲಿದ್ದಾರೆ.
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಕೆಎಲ್ ರಾಹುಲ್ ಗಾಯಗೊಂಡಿದ್ದರು. ಹೀಗಾಗಿ 2ನೇ ಓವರ್ ಬಳಿಕ ಅವರು ಫೀಲ್ಡಿಂಗ್ ಮಾಡಿರಲಿಲ್ಲ. ಅಲ್ಲದೆ 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದರೂ ಓಡುವ ಸ್ಥಿತಿಯಲ್ಲಿರಲಿಲ್ಲ. ಇದೀಗ ತೊಡೆಯ ಗಾಯದ ಕಾರಣ ವೈದ್ಯಕೀಯ ಪರಿಶೀಲನೆಗೆ ಮುಂದಾಗಿದ್ದಾರೆ.
ಪ್ರಸ್ತುತ ಮಾಹಿತಿ ಪ್ರಕಾರ, ಗುರುವಾರ ಕೆಎಲ್ ರಾಹುಲ್ ಮುಂಬೈಗೆ ತೆರಳಲಿದ್ದು, ಅಲ್ಲಿ ತೊಡೆಯ ಗಾಯದ ಸ್ಕ್ಯಾನಿಂಗ್ಗೆ ಒಳಗಾಗಲಿದ್ದಾರೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೆಎಲ್ಆರ್ ಕಣಕ್ಕಿಳಿಯುವುದಿಲ್ಲ ಎಂಬುದು ಖಚಿತವಾಗಿದೆ.
ಇನ್ನು ಸ್ಕ್ಯಾನಿಂಗ್ ರಿಪೋರ್ಟ್ ಬಳಿಕ ವೈದ್ಯರು ವಿಶ್ರಾಂತಿ ಸೂಚಿಸಿದರೆ, ಕೆಎಲ್ ರಾಹುಲ್ ಐಪಿಎಲ್ನ ಮುಂದಿನ ಪಂದ್ಯಗಳಿಂದ ಹೊರಗುಳಿಯುವುದು ಬಹುತೇಕ ಖಚಿತ. ಏಕೆಂದರೆ ಐಪಿಎಲ್ ಬಳಿಕ ಅವರು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಕಣಕ್ಕಿಳಿಯಬೇಕಿದ್ದು, ಹೀಗಾಗಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವ ಸಾಧ್ಯತೆಯಿಲ್ಲ.
ಕೆಎಲ್ ರಾಹುಲ್ ಅವರ ಅನುಪಸ್ಥಿತಿಯಲ್ಲಿ ಮುಂಬರುವ ಪಂದ್ಯಗಳಲ್ಲಿ ಕೃನಾಲ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ.
ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ಜಯದೇವ್ ಉನಾದ್ಕಟ್ ಅಭ್ಯಾಸದ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಗಾಗಿ ಅವರು ಕೂಡ ಮುಂಬರುವ ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಒಟ್ಟಿನಲ್ಲಿ ಪ್ಲೇಆಫ್ ಹಂತಕ್ಕೇರಲು ನಿರ್ಣಾಯಕವಾಗಿರುವ ದ್ವಿತಿಯಾರ್ಧದ ವೇಳೆ ಇಬ್ಬರು ಪ್ರಮುಖ ಆಟಗಾರರು ಹೊರಗುಳಿಯುತ್ತಿರುವುದು ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಿಗೆ ಹಿನ್ನಡೆಯಾಗಲಿದೆ.