Updated on: May 19, 2023 | 4:54 PM
ಐಪಿಎಲ್ 16 ನೇ ಆವೃತ್ತಿಯಲ್ಲಿ ಪ್ಲೇಆಫ್ಗೆ ಟಿಕೆಟ್ ಖಚಿತಪಡಿಸಿಕೊಳ್ಳಲು ಹೋರಾಡುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಹೊಸ ಆಟಗಾರನ ಎಂಟ್ರಿಯಾಗಿದೆ. ಲಕ್ನೋ ತಂಡ ಈಗಾಗಲೇ ನಾಯಕ ಕೆಎಲ್ ರಾಹುಲ್ ಮತ್ತು ಹಿರಿಯ ವೇಗಿ ಜಯದೇವ್ ಉನದ್ಕಟ್ ಅಲಭ್ಯತೆಯಿಂದ ಕೊಂಚ ಹಿನ್ನಡೆ ಅನುಭವಿಸಿದೆ.
ಐಪಿಎಲ್ ಆರಂಭದಲ್ಲೇ ರಾಹುಲ್ ಮತ್ತು ಉನದ್ಕಟ್ ಇಂಜುರಿಯಿಂದಾಗಿ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ನಾಯಕ ರಾಹುಲ್ ಬದಲಿಗೆ ಹಿರಿಯ ಬ್ಯಾಟರ್ ಕರುಣ್ ನಾಯರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದ ಲಕ್ನೋ ಸೂಪರ್ ಜೈಂಟ್ಸ್ ಗುರುವಾರ ವೇಗಿ ಉನಾದ್ಕಟ್ ಅವರ ಬದಲಿ ಆಟಗಾರನನ್ನು ಆಯ್ಕೆ ಮಾಡಿಕೊಂಡಿದೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಲಕ್ನೋ, ಇಂಡಿಯನ್ ಪ್ರೀಮಿಯರ್ ಲೀಗ್ 2023 ರ ಉಳಿದ ಭಾಗಕ್ಕೆ ಗಾಯಗೊಂಡಿರುವ ವೇಗಿ ಉನದ್ಕಟ್ ಬದಲಿಯಾಗಿ ಲಕ್ನೋ ಸೂಪರ್ ಜೈಂಟ್ಸ್ ಸೂರ್ಯಾಂಶ್ ಶೆಡ್ಗೆ ಅವರನ್ನು ಆಯ್ಕೆ ಮಾಡಿದೆ. ಸೂರ್ಯಾಂಶ್ ಅವರನ್ನು ಮೂಲ ಬೆಲೆ 20 ಲಕ್ಷಕ್ಕೆ ಖರೀದಿಸಲಾಗಿದೆ.
ಸೂರ್ಯಾಂಶ್ ಇನ್ನೂ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿಲ್ಲ. ಆದರೆ ಸೂರ್ಯಾಂಶ್ ಗಿಲ್ಸ್ ಶೀಲ್ಡ್ ಟ್ರೋಫಿಯಲ್ಲಿ ಅತಿವೇಗದ ತ್ರಿಶತಕ ಬಾರಿಸಿದ್ದಾರೆ. 7 ವರ್ಷಗಳ ಹಿಂದೆ ಗುಂಡೇಜ ಎಜುಕೇಶನ್ ಅಕಾಡೆಮಿ (ಕಾಂದಿವಲಿ) ಪರ SPSS ಮುಂಬಾದೇವಿ ನಿಕೇತನ ವಿರುದ್ಧ ಸೂರ್ಯಾಂಶ್ 137 ಎಸೆತಗಳಲ್ಲಿ 326 ರನ್ ಬಾರಿಸಿದ್ದರು.ಇದೀಗ ಐಪಿಎಲ್‌ನ ಕೊನೆಯ ಹಂತದಲ್ಲಿ ಸೂರ್ಯಾಂಶ್‌ಗೆ ಅವಕಾಶ ಸಿಕ್ಕಿದೆ. ಆದರೆ ಆ ನಂತರವೂ ಈ ಅವಕಾಶವನ್ನು ಸೂರ್ಯಾಂಶ್ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದೇ ಕ್ರಿಕೆಟ್ ಲೋಕದ ಗಮನ.
ಇನ್ನೂ ಐಪಿಎಲ್ನಲ್ಲಿ ಗಾಯಗೊಂಡಿರುವ ಜಯದೇವ್, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮುಂಚಿತವಾಗಿ ಸಂಪೂರ್ಣವಾಗಿ ಫಿಟ್ ಆಗುವ ನಿರೀಕ್ಷೆಯಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ | ಕೃನಾಲ್ ಪಾಂಡ್ಯ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಸ್ವಪ್ನಿಲ್ ಸಿಂಗ್, ಮೊಹ್ಸಿನ್ ಖಾನ್, ಕೈಲ್ ಮೇಯರ್ಸ್, ಯಶ್ ಠಾಕೂರ್, ಕೃಷ್ಣಾ ಠಾಕೂರ್ , ಡೇನಿಯಲ್ ಸಾಮ್ಸ್, ಯುದ್ವೀರ್ ಸಿಂಗ್ ಚರಕ್, ಅಮಿತ್ ಮಿಶ್ರಾ, ಅವೇಶ್ ಖಾನ್, ಅರ್ಪಿತ್ ಗುಲೇರಿಯಾ, ಕರುಣ್ ನಾಯರ್, ಮನನ್ ವೋಹ್ರಾ, ಮಾರ್ಕ್ ವುಡ್, ರೊಮಾರಿಯೋ ಶೆಫರ್ಡ್, ಸೂರ್ಯಾಂಶ್ ಶೆಡ್ಗೆ ಮತ್ತು ಕರಣ್ ಶರ್ಮಾ.