Updated on: May 15, 2023 | 6:16 PM
ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 112 ರನ್‌ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಇತಿಹಾಸದಲ್ಲಿ ಯಾವ ತಂಡವೂ ಮಾಡದ ಅಪರೂಪದ ದಾಖಲೆಯನ್ನು ನಿರ್ಮಿಸಿದೆ.
ಐಪಿಎಲ್ನ 60ನೇ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಅವರ ಅರ್ಧಶತಕಗಳ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ ಕೇವಲ 59 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ನೂರಕ್ಕೂ ಅಧಿಕ ರನ್‌ಗಳ ಗೆಲುವು ಆರ್ಸಿಬಿ ಪಾಲಾಯಿತು.
ರಾಜಸ್ಥಾನ ವಿರುದ್ಧ 112 ರನ್‌ಗಳ ಜಯ ಸಾಧಿಸಿದ ಬೆಂಗಳೂರು ಇದರೊಂದಿಗೆ ರನ್ ರೇಟ್ ಸುಧಾರಿಸಿ 2 ಅಂಕ ಪಡೆದುಕೊಂಡಿದ್ದಲ್ಲದೆ ಈ ಗೆಲುವಿನೊಂದಿಗೆ ದಾಖಲೆ ಕೂಡ ಬರೆದಿದೆ. ಬೆಂಗಳೂರು ಐಪಿಎಲ್‌ನಲ್ಲಿ ಇದುವರೆಗೆ 100 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳಿಂದ ಅಧಿಕ ಪಂದ್ಯಗಳನ್ನು ಗೆದ್ದ ಏಕೈಕ ತಂಡವಾಗಿ ಹೊರಹೊಮ್ಮಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಇತಿಹಾಸದಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳಿಂದ 4 ಬಾರಿ ಗೆಲುವು ಸಾಧಿಸಿದೆ. ಈ ಆವೃತ್ತಿಯಲ್ಲಿ ಆರ್ಸಿಬಿ ಈ ರೀತಿಯಾಗಿ ಮೊದಲ ಗೆಲುವು ದಾಖಲಿಸಿದ್ದರೆ, ಇದಕ್ಕೂ ಮುನ್ನ ಪುಣೆ ವಾರಿಯರ್ಸ್, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಲಯನ್ಸ್ ತಂಡಗಳನ್ನು 100 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳಿಂದ ಸೋಲಿಸಿತ್ತು.
ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳ ಗೆಲುವಿನ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂಬೈ ಇದುವರೆಗೆ ಎರಡು ಬಾರಿ ಈ ಸಾಧನೆ ಮಾಡಿದೆ. ಇನ್ನು ಆರ್ಸಿಬಿ ಯಾವ ತಂಡದ ವಿರುದ್ಧ ಎಷ್ಟು ರನ್‌ಗಳಿಂದ ಗೆದ್ದಿದೆ ಎಂಬುವುದನ್ನು ನೋಡುವುದಾದರೆ...
2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ 130 ರನ್‌ಗಳಿಂದ ಜಯ ಸಾಧಿಸಿತ್ತು.
ಆ ಬಳಿಕ 2015ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 138 ರನ್‌ಗಳ ಜಯ ದಾಖಲಿಸಿತ್ತು
2016ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ 144 ರನ್‌ಗಳ ಜಯ ಸಾಧಿಸಿತ್ತು
ಸದ್ಯ ಈ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 112 ರನ್‌ಗಳ ಜಯ ದಾಖಲಿಸಿ ಅಪರೂಪದ ದಾಖಲೆ ಬರೆದಿದೆ.