Updated on: Apr 06, 2023 | 3:27 PM
ಐಪಿಎಲ್‌ನಲ್ಲಿ ಇಂದು ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳು ಮುಖಾಮುಖಿಯಾಗುತ್ತಿವೆ. ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುವ 10ನೇ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ಪರ ಕಿಂಗ್ ಕೊಹ್ಲಿ ಹಲವು ದಾಖಲೆಗಳನ್ನು ಸೃಷ್ಟಿಸುವ ತವಕದಲ್ಲಿದ್ದಾರೆ. ಅಂತಹ ಕೆಲವು ದಾಖಲೆಗಳ ವಿವರ ಇಲ್ಲಿದೆ.
ಇಂದಿನ ಪಂದ್ಯದಲ್ಲಿ ಕೊಹ್ಲಿ ಕ್ಯಾಚ್‌ಗಳ ಶತಕ ಪೂರೈಸಲು ಆರು ಕ್ಯಾಚ್‌ಗಳ ದೂರದಲ್ಲಿದ್ದಾರೆ. ವಿರಾಟ್ ಇದುವರೆಗೆ ಐಪಿಎಲ್‌ನಲ್ಲಿ 94 ಕ್ಯಾಚ್‌ಗಳನ್ನು ಹಿಡಿದಿದ್ದು, ಇಂದಿನ ಪಂದ್ಯದಲ್ಲಿ ಈ ದಾಖಲೆ ಸೃಷ್ಟಿಸುವ ಹೊಸ್ತಿಲಿನಲ್ಲಿದ್ದಾರೆ.
ಇನ್ನು ವಿಶ್ವದ ಈ ಶ್ರೀಮಂತ ಟಿ20 ಲೀಗ್‌ನಲ್ಲಿ ಕೊಹ್ಲಿ ಇಂದು ಆರ್‌ಸಿಬಿ ಪರ ಕಣಕ್ಕಿಳಿದರೆ, 225ನೇ ಪಂದ್ಯವನ್ನಾಡಿದ ದಾಖಲೆ ಬರೆಯಲಿದ್ದಾರೆ. ವಾಸ್ತವವಾಗಿ ಕೊಹ್ಲಿ 2008 ರಲ್ಲಿ ಇದೇ ಕೆಕೆಆರ್ ತಂಡದ ವಿರುದ್ಧ M.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತಮ್ಮ ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಿದ್ದರು.
ಈ ಪಂದ್ಯದಲ್ಲಿ ಕೊಹ್ಲಿ 92 ರನ್ ಬಾರಿಸಿದರೆ, ಚುಟುಕು ಮಾದರಿಯಲ್ಲಿ 11,500 ರನ್‌ಗಳನ್ನು ಪೂರ್ಣಗೊಳಿಸಿದ ದಾಖಲೆ ಸೃಷ್ಟಿಸಲಿದ್ದಾರೆ. ಈ ಟೂರ್ನಿಯಲ್ಲಿ 6,700ಕ್ಕೂ ಹೆಚ್ಚು ರನ್ ಬಾರಿಸಿರುವ ಕೊಹ್ಲಿ, ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಹಾಗೆಯೇ ಬೆಂಗಳೂರು ಪರ 5 ಶತಕ ಮತ್ತು 45 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.
ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲ್ಲಿರುವ ಈ ಪಂದ್ಯದಲ್ಲಿ 500 ರನ್ ಪೂರ್ಣಗೊಳಿಸಿದ ದಾಖಲೆ ಬರೆಯಲು ಕೊಹ್ಲಿಗೆ ಇನ್ನು ಕೇವಲ 29 ರನ್ಗಳಷ್ಟೇ ಬೇಕು. ಈ ಮೈದಾನದಲ್ಲಿ ಕೊಹ್ಲಿ ಇದುವರೆಗೆ 471 ರನ್ ಸಿಡಿಸಿದ್ದಾರೆ. ಈಡನ್ ಗಾರ್ಡನ್‌ನಲ್ಲಿ ಅದೇ ಮೈಲಿಗಲ್ಲನ್ನು ಪೂರ್ಣಗೊಳಿಸಲು ಕೆಕೆಆರ್‌ನ ಸ್ಟ್ಯಾಂಡ್-ಇನ್ ನಾಯಕ ನಿತೀಶ್ ರಾಣಾ ಕೇವಲ 8 ರನ್‌ಗಳ ಅಂತರದಲ್ಲಿದ್ದಾರೆ.
ಇದಕ್ಕೂ ಮೊದಲು, ಐಪಿಎಲ್‌ನಲ್ಲಿ 50 ಫಿಫ್ಟಿ ಪ್ಲಸ್ ಸ್ಕೋರ್‌ಗಳನ್ನು ದಾಖಲಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದರು. ಅಷ್ಟೇ ಅಲ್ಲದೆ ಐಪಿಎಲ್‌ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಕ್ಸರ್‌ಗಳ ಶತಕ ಗಳಿಸಿದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
Published On - 3:27 pm, Thu, 6 April 23