
IPL 2023: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್ಸಿಬಿ ನಡುವಣ ಪಂದ್ಯಕ್ಕೂ ಮುನ್ನ ದೆಹಲಿಯ ಅರುಣ್ ಜೇಟ್ಲಿ ಮೈದಾನವು ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ಪಂದ್ಯದ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿಯ ಬಾಲ್ಯದ ಕೋಚ್ ರಾಜ್ಕುಮಾರ್ ಶರ್ಮಾ ಮೈದಾನದಲ್ಲಿ ಕಾಣಿಸಿಕೊಂಡಿದ್ದರು.

ಇತ್ತ ಮೈದಾನದ ಮತ್ತೊಂದು ಬದಿಯಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದ ಕಿಂಗ್ ಕೊಹ್ಲಿ, ಅಭ್ಯಾಸ ನಿಲ್ಲಿಸಿ ಕೋಚ್ನತ್ತ ಧಾವಿಸಿದರು. ಅಷ್ಟೇ ಅಲ್ಲದೆ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದು ಕೆಲ ಕಾಲ ಕುಶಲೋಪರಿ ನಡೆಸಿದರು.

ಇದೀಗ ಗುರು ಶಿಷ್ಯರ ಸಂಬಂಧವನ್ನು ಸಾರುವ ರಾಜ್ಕುಮಾರ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಕೊಹ್ಲಿ ತಮ್ಮ ಬಾಲ್ಯದ ಕೋಚ್ಗೆ ನೀಡಿದ ಗೌರವಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಆರ್ಸಿಬಿಗೆ ಡುಪ್ಲೆಸಿಸ್ ಹಾಗೂ ಕೊಹ್ಲಿ ಭರ್ಜರಿ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್ಗೆ 10 ಓವರ್ಗಳಲ್ಲಿ 82 ರನ್ ಕಲೆಹಾಕುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಈ ಹಂತದಲ್ಲಿ ಡುಪ್ಲೆಸಿಸ್ (45) ಔಟಾದರು. ಇದರ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್ವೆಲ್ (0) ಕೂಡ ಮಿಚೆಲ್ ಮಾರ್ಷ್ಗೆ ವಿಕೆಟ್ ಒಪ್ಪಿಸಿದರು.

ಮತ್ತೊಂದೆಡೆ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ 46 ಎಸೆತಗಳಲ್ಲಿ 55 ರನ್ ಬಾರಿಸಿ 16ನೇ ಓವರ್ನಲ್ಲಿ ಮುಕೇಶ್ ಕುಮಾರ್ಗೆ ವಿಕೆಟ್ ಒಪ್ಪಿಸಿದರು.

ಇನ್ನೊಂದೆಡೆ ಚೊಚ್ಚಲ ಅರ್ಧಶತಕ ಬಾರಿಸುವ ಮೂಲಕ ಮಹಿಪಾಲ್ ಲೋಮ್ರರ್ ತಂಡಕ್ಕೆ ಆಸರೆಯಾದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ ಆರ್ಸಿಬಿ ತಂಡವು 4 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತು.
Published On - 9:15 pm, Sat, 6 May 23