17ನೇ ಐಪಿಎಲ್ಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಇತ್ತೀಚೆಗಷ್ಟೇ ದುಬೈನಲ್ಲಿ ಮುಂಬರುವ ಸೀಸನ್ಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಕೂಡ ನಡೆದಿತ್ತು. ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಮುಂದಿನ ಆವೃತ್ತಿಯ ಐಪಿಎಲ್ ಇದೇ ಮಾರ್ಚ್ ಮೂರನೇ ವಾರದಲ್ಲಿ ಆರಂಭವಾಗಬಹುದು ಎಂದು ಹೇಳಲಾಗುತ್ತಿದೆ.
ಆದಾಗ್ಯೂ ಐಪಿಎಲ್ ಆಡಳಿತ ಮಂಡಳಿಯ ಮುಂದೆ ದೊಡ್ಡ ಸವಾಲು ಎದುರಾಗಿದೆ. ಅದೆನೆಂದರೆ? ಐಪಿಎಲ್ ನಡೆಯುವಾಗಲೇ ದೇಶದಲ್ಲಿ ಲೋಕಸಭೆ ಚುನಾವಣೆಯೂ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಸೀಸನ್ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ.
ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಚುನಾವಣೆ ನಡೆಯುವ ನಗರಗಳಲ್ಲಿ ಪಂದ್ಯಗಳು ಒಂದೋ ಮೊದಲೇ ಮುಗಿದು ಹೋಗುತ್ತವೆ. ಇಲ್ಲವೇ ಚುನಾವಣೆ ನಂತರ ಪೂರ್ಣಗೊಳ್ಳಲಿವೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಐಪಿಎಲ್ 2024 ಮಾರ್ಚ್ 22 ರಿಂದ ಪ್ರಾರಂಭವಾಗುವ ಸಾಧ್ಯತೆಗಳಿವೆ. ಈ ಬಾರಿಯ ಐಪಿಎಲ್ ದೇಶದ 12 ಕ್ರೀಡಾಂಗಣಗಳಲ್ಲಿ ನಡೆಯಲ್ಲಿದೆ. ಐಪಿಎಲ್‌ಗೂ ಮುನ್ನವೇ ಮಹಿಳಾ ಪ್ರೀಮಿಯರ್ ಲೀಗ್ ಪೂರ್ಣಗೊಳ್ಳಲಿದ್ದು, ಈ ಪಂದ್ಯಾವಳಿ ಫೆಬ್ರವರಿ ಮತ್ತು ಮಾರ್ಚ್ ಒಳಗೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಐಪಿಎಲ್ 2009 ಮತ್ತು 2014 ರ ಸಮಯದಲ್ಲಿಯೂ ಸಹ ದೇಶದಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಹಾಗಾಗಿ ಈ ಎರಡೂ ಆವೃತ್ತಿಗಳನ್ನು ದೇಶದ ಹೊರಗೆ ನಡೆಸಲಾಗಿತ್ತು. ಆದರೆ ಈ ಬಾರಿಯ ಐಪಿಎಲ್ ಅನ್ನು ಭಾರತದಲ್ಲೇ ನಡೆಸಲು ತೀರ್ಮಾನಿಸಲಾಗಿದ್ದು, ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್ ಮಂಡಳಿ ಯಾವ ರೀತಿಯ ವೇಳಾಪಟ್ಟಿ ರಚಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.
ಕಳೆದ ಬಾರಿಯ ಐಪಿಎಲ್ನ ಎಲ್ಲಾ ಪಂದ್ಯಗಳು ಸಹ ಭಾರತದ 12 ನಗರಗಳಲ್ಲಿ ನಡೆದಿದ್ದವು. ಕಳೆದ ವರ್ಷದಂತೆ ಈ ವರ್ಷವೂ ಒಟ್ಟು 10 ತಂಡಗಳು ಐಪಿಎಲ್ನಲ್ಲಿ ಕಣಕ್ಕಿಳಿಯುತ್ತಿದ್ದು, ಎಲ್ಲಾ 10 ತಂಡಗಳು ತವರು ಮೈದಾನ ಹಾಗೂ ತವರಿನಿಂದ ಹೊರಗೆ ಪಂದ್ಯಗಳನ್ನು ಆಡಲಿವೆ.