Updated on: Dec 16, 2023 | 5:33 PM
2024 ರಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ 17 ನೇ ಸೀಸನ್‌ಗಾಗಿ ಮುಂಬೈ ಇಂಡಿಯನ್ಸ್ ತಮ್ಮ ನಾಯಕತ್ವದಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ. ಅದರಂತೆ ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ಹೊಸ ನಾಯಕರನ್ನಾಗಿ ನೇಮಿಸಿದೆ.
ಹಾರ್ದಿಕ್ಗೂ ಮುನ್ನ ರೋಹಿತ್ ಶರ್ಮಾ 2013ರ ಆವೃತ್ತಿಯಿಂದ ಇಲ್ಲಿಯವರೆಗೆ ಮುಂಬೈ ತಂಡದ ನಾಯಕತ್ವದ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ರೋಹಿತ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಐದು ಬಾರಿ ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಮೂಲಕ ಈ ಟಿ20 ಲೀಗ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಯಿತು.
ಹಾರ್ದಿಕ್ ಪಾಂಡ್ಯ 2015 ರಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಅಂದಿನಿಂದ ಈ ಫ್ರಾಂಚೈಸಿಗಾಗಿ ಸತತ ಏಳು ಸೀಸನ್‌ಗಳನ್ನು ಆಡಿದ್ದರು. ಈ ಅವಧಿಯಲ್ಲಿ 92 ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆದಿದ್ದ ಹಾರ್ದಿಕ್, 85 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿ 27.33 ಸರಾಸರಿಯಲ್ಲಿ ನಾಲ್ಕು ಅರ್ಧಶತಕಗಳನೊಳಗೊಂಡಂತೆ 1476 ರನ್ ಬಾರಿಸಿದ್ದರು.
ಅಲ್ಲದೆ ಮುಂಬೈ ಇಂಡಿಯನ್ಸ್ ಪರ 91 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿರುವ ಪಾಂಡ್ಯ ಬೌಲಿಂಗ್ನಲ್ಲೂ ತಮ್ಮ ಕರಾಮತ್ತು ತೊರಿದ್ದಾರೆ. ತಂಡದ ಪರ 92 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಪಾಂಡ್ಯ 31.26 ಸರಾಸರಿಯಲ್ಲಿ 42 ವಿಕೆಟ್ಗಳನ್ನು ಪಡೆದಿದ್ದಾರೆ. ಇದರಲ್ಲಿ 20 ರನ್ಗಳಿಗೆ 3 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಹಾರ್ದಿಕ್ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದಾಗ, ತಂಡವು ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿತ್ತು.
ಇನ್ನು ಐಪಿಎಲ್‌ನಲ್ಲಿ ಹಾರ್ದಿಕ್ ಅವರ ಇದುವರೆಗಿನ ಪ್ರದರ್ಶನವನ್ನು ನೋಡುವುದಾದರೆ.. 2022 ರ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಹೊಸ ಫ್ರಾಂಚೈಸಿ ಗುಜರಾತ್ ಟೈಟಾನ್ಸ್‌ನ ನಾಯಕತ್ವವನ್ನು ವಹಿಸಿಕೊಂಡರು. ಅವರ ನಾಯಕತ್ವದಲ್ಲಿ ತಂಡವು ಚಾಂಪಿಯನ್ ಪಟ್ಟಕ್ಕೇರಿತ್ತು.
ಆ ಬಳಿಕ ಎರಡನೇ ಆವೃತ್ತಿಯಲ್ಲೂ ಗುಜರಾತ್ ತಂಡವು ಸಸತ ಎರಡನೇ ಬಾರಿಗೆ ಫೈನಲ್ ತಲುಪಿತು. ಆದರೆ ಪ್ರಶಸ್ತಿ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು.
ಇದೀಗ ಟ್ರೆಡಿಂಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡ ಸೇರಿಸಿಕೊಂಡಿರುವ ಹಾರ್ದಿಕ್ ಐಪಿಎಲ್‌ನಲ್ಲಿ ಆಡಿರುವ 123 ಪಂದ್ಯಗಳಲ್ಲಿ 30.38 ಸರಾಸರಿಯಲ್ಲಿ 2309 ರನ್ ಗಳಿಸಿದ್ದಾರೆ. ಇದರಲ್ಲಿ 10 ಅರ್ಧ ಶತಕಗಳೂ ಸೇರಿವೆ. ಇದಲ್ಲದೇ 33.26ರ ಸರಾಸರಿಯಲ್ಲಿ 53 ವಿಕೆಟ್ ಕೂಡ ಪಡೆದಿದ್ದಾರೆ.