
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 44ನೇ ಪಂದ್ಯದಲ್ಲಿ ಒಂದು ವಿಕೆಟ್ ಕಬಳಿಸಿ ಅಮಿತ್ ಮಿಶ್ರಾ ವಿಶೇಷ ದಾಖಲೆ ಬರೆದಿದ್ದಾರೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿತ್ತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್ ಕಲೆಹಾಕಿತು. ರಾಜಸ್ಥಾನ್ ರಾಯಲ್ಸ್ ಇನಿಂಗ್ಸ್ ವೇಳೆ ಲಕ್ನೋ ಸೂಪರ್ ಜೈಂಟ್ಸ್ ಪರ ಅಮಿತ್ ಮಿಶ್ರಾ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದರು.

ಈ ವೇಳೆ ಎರಡು ಓವರ್ಗಳನ್ನು ಬೌಲ್ ಮಾಡಿದ ಅಮಿತ್ ಮಿಶ್ರಾ 20 ರನ್ ನೀಡಿ 1 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಈ ವಿಕೆಟ್ನೊಂದಿಗೆ ಐಪಿಎಲ್ನಲ್ಲಿ ವಿಕೆಟ್ ಕಬಳಿಸಿದ ಅತ್ಯಂತ ಹಿರಿಯ ಬೌಲರ್ ಎಂಬ ಹಿರಿಮೆಗೂ ಮಿಶ್ರಾ ಪಾತ್ರರಾದರು.

ಅಮಿತ್ ಮಿಶ್ರಾ ತಮ್ಮ 41ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದು, ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವಿಕೆಟ್ ಪಡೆದ ಅತ್ಯಂತ ಹಿರಿಯ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಈ ಒಂದು ವಿಕೆಟ್ನೊಂದಿಗೆ ಐಪಿಎಲ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಮಿಶ್ರಾ 4ನೇ ಸ್ಥಾನಕ್ಕೇರಿದ್ದಾರೆ.

ಐಪಿಎಲ್ನ 162 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅಮಿತ್ ಮಿಶ್ರಾ ಈವರೆಗೆ 3371 ಎಸೆತಗಳನ್ನು ಎಸೆದಿದ್ದಾರೆ. ಇದೇ ವೇಳೆ 174 ವಿಕೆಟ್ ಕಬಳಿಸುವ ಮೂಲಕ ಲಸಿತ್ ಮಾಲಿಂಗ (173) ಅವರನ್ನು ಹಿಂದಿಕ್ಕಿ ಐಪಿಎಲ್ ವಿಕೆಟ್ ಸರದಾರರ ಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸಿದ್ದಾರೆ.