
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಆಘಾತ ಎದುರಾಗಿದೆ. ಸಿಎಸ್ಕೆ ತಂಡದ ಸ್ಟಾರ್ ಆಟಗಾರ ಈ ಬಾರಿಯ ಐಪಿಎಲ್ನಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.

ಹೌದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಡೆವೊನ್ ಕಾನ್ವೆ (Devon Conway) ಗಾಯಗೊಂಡಿದ್ದು, ಅವರು ಮೇ ತಿಂಗಳ ತನಕ ಮೈದಾನಕ್ಕಿಳಿಯಲು ಸಾಧ್ಯವಾಗುವುದಿಲ್ಲ ಎಂದು ವರದಿಯಾಗಿದೆ. ಹೀಗಾಗಿ ಈ ಬಾರಿಯ ಐಪಿಎಲ್ಗೆ ಕಾನ್ವೆ ಅಲಭ್ಯರಾಗುವ ಸಾಧ್ಯತೆ ಹೆಚ್ಚಿದೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ವೇಳೆ ನ್ಯೂಝಿಲೆಂಡ್ ಆಟಗಾರ ಡೆವೊನ್ ಕಾನ್ವೆ ಅವರ ಎಡಗೈ ಹೆಬ್ಬೆರಳಿಗೆ ಗಾಯವಾಗಿತ್ತು. ಇದೀಗ ವೈದ್ಯಕೀಯ ವರದಿಯಲ್ಲಿ ಶಸ್ತ್ರಚಿಕಿತ್ಸೆ ಅನಿವಾರ್ಯ ಎಂದು ತಿಳಿದು ಬಂದಿದ್ದು, ಹೀಗಾಗಿ ಈ ವಾರ ಅವರು ಸರ್ಜರಿಗೆ ಒಳಗಾಗಲಿದ್ದಾರೆ. ಅಲ್ಲದೆ ಕನಿಷ್ಠ ಎಂಟು ವಾರಗಳವರೆಗೆ ಅವರು ವಿಶ್ರಾಂತಿ ಪಡೆಯಲಿದ್ದಾರೆ.

ಅಂದರೆ ಮೇ ತಿಂಗಳ ತನಕ ಡೆವೊನ್ ಕಾನ್ವೆ ಕಣಕ್ಕಿಳಿಯುವುದಿಲ್ಲ. ಇತ್ತ ಐಪಿಎಲ್ ಮಾರ್ಚ್ 22 ರಿಂದ ಶುರುವಾಗಲಿದ್ದು, ಮೇ ತಿಂಗಳಾಂತ್ಯದಲ್ಲಿ ಮುಗಿಯಲಿದೆ. ಹಾಗೆಯೇ ಟಿ20 ವಿಶ್ವಕಪ್ ಜೂನ್ 1 ರಿಂದ ಆರಂಭವಾಗಲಿದೆ.

ಹೀಗಾಗಿ ಕಾನ್ವೆ ಐಪಿಎಲ್ನಿಂದ ಹೊರಗುಳಿಯುವುದು ಬಹುತೇಕ ಖಚಿತ. ಅಲ್ಲದೆ ಸಂಪೂರ್ಣ ಫಿಟ್ನೆಸ್ನೊಂದಿಗೆ ಮುಂಬರುವ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಅದರಂತೆ ಈ ಬಾರಿಯ ಐಪಿಎಲ್ನಲ್ಲಿ ಸಿಎಸ್ಕೆ ಪರ ಹೊಸ ಆರಂಭಿಕ ಆಟಗಾರ ಇನಿಂಗ್ಸ್ ಆರಂಭಿಸಲಿದ್ದಾರೆ.

ಕಳೆದ ಐಪಿಎಲ್ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 16 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಡೆವೊನ್ ಕಾನ್ವೆ 6 ಅರ್ಧಶತಕಗಳೊಂದಿಗೆ ಒಟ್ಟು 672 ರನ್ ಕಲೆಹಾಕಿದ್ದರು. ಈ ಮೂಲಕ ಸಿಎಸ್ಕೆ ತಂಡವು ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಈ ಬಾರಿ ಅವರ ಅಲಭ್ಯತೆಯು ಸಿಎಸ್ಕೆ ಪಾಲಿಗೆ ಹಿನ್ನಡೆಯನ್ನುಂಟು ಮಾಡಬಹುದು.
Published On - 8:31 am, Mon, 4 March 24