
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2024) ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಡೆಲ್ಲಿ ತಂಡದ ಪ್ರಮುಖ ಆಟಗಾರ ಕುಲ್ದೀಪ್ ಯಾದವ್ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ.

ಕುಲ್ದೀಪ್ ಯಾದವ್ ತೊಡೆಸಂಧು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ವೈದ್ಯರು ಅವರಿಗೆ ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ. ಇದೇ ಕಾರಣದಿಂದಾಗಿ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ.

ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಗುಳಿದಿರುವ ಕುಲ್ದೀಪ್ ಯಾದವ್ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ ತೆರಳುವ ಸಾಧ್ಯತೆಯಿದೆ. ಅಲ್ಲದೆ ಅಲ್ಲಿ ರಿಹ್ಯಾಬ್ಗೆ ಒಳಗಾಗಲಿದ್ದಾರೆ. ಅಂದರೆ ಟೀಮ್ ಇಂಡಿಯಾ ಆಟಗಾರರು ಗಾಯಗೊಂಡರೆ, ಅಥವಾ ಇನ್ನಿತರ ಫಿಟ್ನೆಸ್ ಸಮಸ್ಯೆಗೆ ಒಳಗಾದರೆ ಎನ್ಸಿಎ ಕಡೆಯಿಂದ ಫಿಟ್ನೆಸ್ ಪ್ರಮಾಣ ಪತ್ರವನ್ನು ಪಡೆಯಬೇಕು.

ಹೀಗಾಗಿ ತೊಡೆಸಂಧು ನೋವಿನ ಸಮಸ್ಯೆಗೆ ಒಳಗಾಗಿರುವ ಕುಲ್ದೀಪ್ ಯಾದವ್ ಮತ್ತೆ ಕಣಕ್ಕಿಳಿಯಬೇಕಿದ್ದರೆ ಎನ್ಸಿಎ ಕಡೆಯಿಂದ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಬೇಕಾಗುತ್ತದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಿರಿಯ ಸ್ಪಿನ್ನರ್ ಮೊದಲಾರ್ಧದ ಪಂದ್ಯಗಳಿಗೆ ಅಲಭ್ಯರಾಗುವುದು ಬಹುತೇಕ ಖಚಿತ ಎನ್ನಬಹುದು.

ಇನ್ನು ಈ ಬಾರಿಯ ಐಪಿಎಲ್ನಲ್ಲಿ ಇದುವರೆಗೆ 4 ಪಂದ್ಯಗಳನ್ನಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ 1 ಮ್ಯಾಚ್ನಲ್ಲಿ ಮಾತ್ರ ಜಯ ಸಾಧಿಸಿದೆ. ಇದೀಗ ಮೂರು ಸೋಲುಗಳೊಂದಿಗೆ ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ರಿಷಭ್ ಪಂತ್ ಪಡೆಗೆ ಅನುಭವಿ ಸ್ಪಿನ್ನರ್ ಕುಲ್ದೀಪ್ ಯಾದವ್ ಅನುಪಸ್ಥಿತಿಯು ದೊಡ್ಡ ಹೊಡೆತ ನೀಡಲಿದೆ ಎಂದೇ ಹೇಳಬಹುದು.