ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೇವಲ ಮೂರು ಬಾರಿ ಮಾತ್ರ ಫೈನಲ್ ಆಡಿದೆ. ಆದರೆ 16 ಸೀಸನ್ಗಳಲ್ಲಿ 14 ಪ್ಲೇಆಫ್ ಪಂದ್ಯಗಳನ್ನಾಡಿದೆ. ಈ ವೇಳೆ ಎಲಿಮಿನೇಟರ್ ಪಂದ್ಯವಾಡಿದ್ದು ಕೇವಲ 4 ಬಾರಿ ಮಾತ್ರ.
ಆರ್ಸಿಬಿ ತಂಡವು ಮೊದಲ ಬಾರಿಗೆ ಎಲಿಮಿನೇಟರ್ ಪಂದ್ಯವಾಡಿದ್ದ್ದು 2015 ರಲ್ಲಿ. ಈ ಪಂದ್ಯದಲ್ಲಿ ಆರ್ಸಿಬಿ ಮತ್ತು ಆರ್ಆರ್ ತಂಡಗಳು ಮುಖಾಮುಖಿಯಾಗಿದ್ದವು. ನಿರ್ಣಾಯಕ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್ಸಿಬಿ 2ನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಿತು. ಆದರೆ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಸೋಲನುಭವಿಸಿತು.
2020 ರಲ್ಲಿ ಆರ್ಸಿಬಿ ತಂಡವು 4ನೇ ಸ್ಥಾನದೊಂದಿಗೆ ಎಲಿಮಿನೇಟರ್ ರೌಂಡ್ಗೆ ಪ್ರವೇಶಿಸಿತ್ತು. ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ಗಳ ಸೋಲನುಭವಿಸಿತ್ತು.
ಇದಾದ ಬಳಿಕ 2021 ರಲ್ಲಿ ಮತ್ತೊಮ್ಮೆ ಆರ್ಸಿಬಿ ಪ್ಲೇಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್ಸಿಬಿ ತಂಡ ಜಯಗಳಿಸಲು ವಿಫಲವಾಯಿತು.
ಇನ್ನು 2022 ರಲ್ಲಿ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿ ಆರ್ಸಿಬಿ ತಂಡಕ್ಕೆ ಎದುರಾಳಿಯಾಗಿ ಸಿಕ್ಕಿದ್ದು ಲಕ್ನೋ ಸೂಪರ್ ಜೈಂಟ್ಸ್. LSG ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್ಸಿಬಿ 2ನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಿತು. ಆದರೆ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಗ್ಗರಿಸಿತು.
ಅಂದರೆ ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ತಂಡವು ನಾಲ್ಕು ಬಾರಿ ಮಾತ್ರ ಎಲಿಮಿನೇಟರ್ ಪಂದ್ಯವಾಡಿದ್ದು, ಈ ವೇಳೆ ಎರಡು ಬಾರಿ ಜಯ ಸಾಧಿಸಿದೆ. ಇದಾಗ್ಯೂ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್ಸಿಬಿ ಒಮ್ಮೆಯೂ ಫೈನಲ್ಗೆ ತಲುಪಿಲ್ಲ. ಆದರೆ ಈ ಬಾರಿ ಸತತ ಗೆಲುವುಗಳೊಂದಿಗೆ ಹೊಸ ಹುಮ್ಮಸ್ಸಿನಲ್ಲಿರುವ ಆರ್ಸಿಬಿ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
Published On - 7:52 pm, Mon, 20 May 24