ಐಪಿಎಲ್ (IPL 2024) ಸೀಸನ್ 17ರ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಮುಖಾಮುಖಿಯಾಗಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್ನಲ್ಲಿ ಸೋಲುವ ತಂಡ ಐಪಿಎಲ್ನಿಂದ ಹೊರಬೀಳಲಿದೆ.
ಹೀಗಾಗಿ ನಿರ್ಣಾಯಕ ಪಂದ್ಯಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಬಳಗವನ್ನೇ ಕಣಕ್ಕಿಳಿಸಲಿದೆ. ಅಂದರೆ ಇಲ್ಲಿ ಆರ್ಸಿಬಿ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿಲ್ಲ. ಏಕೆಂದರೆ ಕಳೆದ 6 ಪಂದ್ಯಗಳಲ್ಲಿ ಆರ್ಸಿಬಿ ಸತತ ಜಯ ಸಾಧಿಸಿದೆ. ಹೀಗಾಗಿ ಇದೇ ಆಟಗಾರರನ್ನೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೂಡ ಕಣಕ್ಕಿಳಿಸಲಿದ್ದಾರೆ. ಅದರಂತೆ ಆರ್ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ...
1- ಫಾಫ್ ಡುಪ್ಲೆಸಿಸ್: ಆರ್ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಕಳೆದ 14 ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಎಲ್ಲಾ ಮ್ಯಾಚ್ಗಳಲ್ಲೂ ಆರಂಭಿಕನಾಗಿ ಕಣಕ್ಕಿಳಿದಿರುವ ಫಾಫ್ ಒಟ್ಟು 421 ರನ್ ಕಲೆಹಾಕುವ ಮೂಲಕ ಆರ್ಸಿಬಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದಾರೆ.
2- ವಿರಾಟ್ ಕೊಹ್ಲಿ: ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡ ಪ್ಲೇಆಫ್ ಹಂತಕ್ಕೇರಲು ಮುಖ್ಯ ಕಾರಣ ವಿರಾಟ್ ಕೊಹ್ಲಿ ಎನ್ನಬಹುದು. ಏಕೆಂದರೆ 14 ಇನಿಂಗ್ಸ್ಗಳಲ್ಲಿ ಕೊಹ್ಲಿ ಕಲೆಹಾಕಿರುವುದು ಬರೋಬ್ಬರಿ 708 ರನ್ಗಳು. ಈ ಮೂಲಕ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
3- ರಜತ್ ಪಾಟಿದಾರ್: ಆರ್ಸಿಬಿ ತಂಡದ ಬ್ಯಾಟಿಂಗ್ ಶಕ್ತಿಯಾಗಿ ರಜತ್ ಪಾಟಿದಾರ್ ಮಿಂಚುತ್ತಿದ್ದಾರೆ. 3ನೇ ಕ್ರಮಾಂಕದಲ್ಲಿ 12 ಇನಿಂಗ್ಸ್ ಆಡಿರುವ ಪಾಟಿದಾರ್ ಒಟ್ಟು 361 ರನ್ ಕಲೆಹಾಕಿದ್ದಾರೆ.
4- ಕ್ಯಾಮರೋನ್ ಗ್ರೀನ್: ಆರಂಭಿಕ ಪಂದ್ಯಗಳಲ್ಲಿ ವಿಫಲರಾಗಿದ್ದ ಕ್ಯಾಮರೋನ್ ಗ್ರೀನ್ ಇದೀಗ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 12 ಪಂದ್ಯಗಳನ್ನಾಡಿರುವ ಗ್ರೀನ್ 228 ರನ್ ಹಾಗೂ 9 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
5- ಗ್ಲೆನ್ ಮ್ಯಾಕ್ಸ್ವೆಲ್: ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್. ಈವರೆಗೆ ಆಡಿದ 8 ಇನಿಂಗ್ಸ್ಗಳಿಂದ ಕಲೆಹಾಕಿದ ಒಟ್ಟು ಸ್ಕೋರ್ 52 ರನ್ಗಳು. ಇದಾಗ್ಯೂ ಸಿಎಸ್ಕೆ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಆರ್ಆರ್ ವಿರುದ್ಧ ಕೂಡ ಮ್ಯಾಕ್ಸ್ವೆಲ್ ಕಣಕ್ಕಿಳಿಯಲಿದ್ದಾರೆ.
6- ದಿನೇಶ್ ಕಾರ್ತಿಕ್: ಆರ್ಸಿಬಿ ಪರ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯುತ್ತಿರುವ ಡಿಕೆ 12 ಇನಿಂಗ್ಸ್ಗಳಿಂದ ಒಟ್ಟು 315 ರನ್ ಕಲೆಹಾಕಿ ಮಿಂಚಿದ್ದಾರೆ.
7- ಸ್ವಪ್ನಿಲ್ ಸಿಂಗ್: ಆರ್ಸಿಬಿ ಪರ 6 ಪಂದ್ಯಗಳನ್ನಾಡಿರುವ ಸ್ವಪ್ನಿಲ್ ಸಿಂಗ್ 6 ವಿಕೆಟ್ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಆರ್ಆರ್ ವಿರುದ್ಧ ಕೂಡ ಸ್ವಪ್ನಿಲ್ ಕಾಣಿಸಿಕೊಳ್ಳುವುದು ಖಚಿತ.
8- ಕರ್ಣ್ ಶರ್ಮಾ: ಆರ್ಸಿಬಿ ತಂಡದ ಹಿರಿಯ ಸ್ಪಿನ್ನರ್ ಕರ್ಣ್ ಶರ್ಮಾ ಈವರೆಗೆ 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಈ ವೇಳೆ 6 ವಿಕೆಟ್ಗಳನ್ನು ಕಬಳಿಸಿದ್ದಾರೆ.
9- ಯಶ್ ದಯಾಳ್: ಸಿಎಸ್ಕೆ ವಿರುದ್ಧದ ಪಂದ್ಯದ ಗೆಲುವಿನ ರೂವಾರಿ ಎಡಗೈ ವೇಗಿ ಯಶ್ ದಯಾಳ್ ಈ ಬಾರಿ 13 ಪಂದ್ಯಗಳನ್ನಾಡಿದ್ದು, ಈ ವೇಳೆ 15 ವಿಕೆಟ್ಗಳನ್ನು ಕಬಳಿಸಿದ್ದಾರೆ.
10- ಮೊಹಮ್ಮದ್ ಸಿರಾಜ್: ಆರ್ಸಿಬಿ ಪರ 13 ಪಂದ್ಯಗಳನ್ನಾಡಿರುವ ಮೊಹಮ್ಮದ್ ಸಿರಾಜ್ 13 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
11- ಲಾಕಿ ಫರ್ಗುಸನ್: ಆರ್ಸಿಬಿ ಪರ 6 ಪಂದ್ಯಗಳನ್ನಾಡಿರುವ ವೇಗಿ ಲಾಕಿ ಫರ್ಗುಸನ್ ಈವರೆಗೆ 8 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ಫರ್ಗುಸನ್ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.
12- ಮಹಿಪಾಲ್ ಲೋಮ್ರರ್: ಕಳೆದ ಕೆಲ ಪಂದ್ಯಗಳಿಂದ ಆರ್ಸಿಬಿ ಪರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮಹಿಪಾಲ್ ಲೋಮ್ರರ್ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ನಿರ್ಣಾಯಕ ಪಂದ್ಯದಲ್ಲೂ ಲೋಮ್ರರ್ ಇಂಪ್ಯಾಕ್ಟ್ ಸಬ್ ಆಗಿ ಬ್ಯಾಟಿಂಗ್ಗೆ ಆಗಮಿಸಬಹುದು.
Published On - 10:57 pm, Mon, 20 May 24