IPL 2024: ನಿರ್ಣಾಯಕ ಪಂದ್ಯಕ್ಕೆ ಬಲಿಷ್ಠ ಬಳಗವನ್ನೇ ಕಣಕ್ಕಿಳಿಸಲಿದೆ RCB
IPL 2024 RCB vs RR: ಐಪಿಎಲ್ ಸೀಸನ್ 17 ಪ್ಲೇಆಫ್ ಹಂತಕ್ಕೆ ಬಂದು ನಿಂತಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಎಲಿಮಿನೇಟರ್ ಮ್ಯಾಚ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಿಸಲಿದೆ.
Updated on:May 20, 2024 | 10:59 PM

ಐಪಿಎಲ್ (IPL 2024) ಸೀಸನ್ 17ರ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಮುಖಾಮುಖಿಯಾಗಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್ನಲ್ಲಿ ಸೋಲುವ ತಂಡ ಐಪಿಎಲ್ನಿಂದ ಹೊರಬೀಳಲಿದೆ.

ಹೀಗಾಗಿ ನಿರ್ಣಾಯಕ ಪಂದ್ಯಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಬಳಗವನ್ನೇ ಕಣಕ್ಕಿಳಿಸಲಿದೆ. ಅಂದರೆ ಇಲ್ಲಿ ಆರ್ಸಿಬಿ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿಲ್ಲ. ಏಕೆಂದರೆ ಕಳೆದ 6 ಪಂದ್ಯಗಳಲ್ಲಿ ಆರ್ಸಿಬಿ ಸತತ ಜಯ ಸಾಧಿಸಿದೆ. ಹೀಗಾಗಿ ಇದೇ ಆಟಗಾರರನ್ನೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೂಡ ಕಣಕ್ಕಿಳಿಸಲಿದ್ದಾರೆ. ಅದರಂತೆ ಆರ್ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ...

1- ಫಾಫ್ ಡುಪ್ಲೆಸಿಸ್: ಆರ್ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಕಳೆದ 14 ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಎಲ್ಲಾ ಮ್ಯಾಚ್ಗಳಲ್ಲೂ ಆರಂಭಿಕನಾಗಿ ಕಣಕ್ಕಿಳಿದಿರುವ ಫಾಫ್ ಒಟ್ಟು 421 ರನ್ ಕಲೆಹಾಕುವ ಮೂಲಕ ಆರ್ಸಿಬಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದಾರೆ.

2- ವಿರಾಟ್ ಕೊಹ್ಲಿ: ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡ ಪ್ಲೇಆಫ್ ಹಂತಕ್ಕೇರಲು ಮುಖ್ಯ ಕಾರಣ ವಿರಾಟ್ ಕೊಹ್ಲಿ ಎನ್ನಬಹುದು. ಏಕೆಂದರೆ 14 ಇನಿಂಗ್ಸ್ಗಳಲ್ಲಿ ಕೊಹ್ಲಿ ಕಲೆಹಾಕಿರುವುದು ಬರೋಬ್ಬರಿ 708 ರನ್ಗಳು. ಈ ಮೂಲಕ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

3- ರಜತ್ ಪಾಟಿದಾರ್: ಆರ್ಸಿಬಿ ತಂಡದ ಬ್ಯಾಟಿಂಗ್ ಶಕ್ತಿಯಾಗಿ ರಜತ್ ಪಾಟಿದಾರ್ ಮಿಂಚುತ್ತಿದ್ದಾರೆ. 3ನೇ ಕ್ರಮಾಂಕದಲ್ಲಿ 12 ಇನಿಂಗ್ಸ್ ಆಡಿರುವ ಪಾಟಿದಾರ್ ಒಟ್ಟು 361 ರನ್ ಕಲೆಹಾಕಿದ್ದಾರೆ.

4- ಕ್ಯಾಮರೋನ್ ಗ್ರೀನ್: ಆರಂಭಿಕ ಪಂದ್ಯಗಳಲ್ಲಿ ವಿಫಲರಾಗಿದ್ದ ಕ್ಯಾಮರೋನ್ ಗ್ರೀನ್ ಇದೀಗ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 12 ಪಂದ್ಯಗಳನ್ನಾಡಿರುವ ಗ್ರೀನ್ 228 ರನ್ ಹಾಗೂ 9 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

5- ಗ್ಲೆನ್ ಮ್ಯಾಕ್ಸ್ವೆಲ್: ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್. ಈವರೆಗೆ ಆಡಿದ 8 ಇನಿಂಗ್ಸ್ಗಳಿಂದ ಕಲೆಹಾಕಿದ ಒಟ್ಟು ಸ್ಕೋರ್ 52 ರನ್ಗಳು. ಇದಾಗ್ಯೂ ಸಿಎಸ್ಕೆ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಆರ್ಆರ್ ವಿರುದ್ಧ ಕೂಡ ಮ್ಯಾಕ್ಸ್ವೆಲ್ ಕಣಕ್ಕಿಳಿಯಲಿದ್ದಾರೆ.

6- ದಿನೇಶ್ ಕಾರ್ತಿಕ್: ಆರ್ಸಿಬಿ ಪರ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯುತ್ತಿರುವ ಡಿಕೆ 12 ಇನಿಂಗ್ಸ್ಗಳಿಂದ ಒಟ್ಟು 315 ರನ್ ಕಲೆಹಾಕಿ ಮಿಂಚಿದ್ದಾರೆ.

7- ಸ್ವಪ್ನಿಲ್ ಸಿಂಗ್: ಆರ್ಸಿಬಿ ಪರ 6 ಪಂದ್ಯಗಳನ್ನಾಡಿರುವ ಸ್ವಪ್ನಿಲ್ ಸಿಂಗ್ 6 ವಿಕೆಟ್ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಆರ್ಆರ್ ವಿರುದ್ಧ ಕೂಡ ಸ್ವಪ್ನಿಲ್ ಕಾಣಿಸಿಕೊಳ್ಳುವುದು ಖಚಿತ.

8- ಕರ್ಣ್ ಶರ್ಮಾ: ಆರ್ಸಿಬಿ ತಂಡದ ಹಿರಿಯ ಸ್ಪಿನ್ನರ್ ಕರ್ಣ್ ಶರ್ಮಾ ಈವರೆಗೆ 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಈ ವೇಳೆ 6 ವಿಕೆಟ್ಗಳನ್ನು ಕಬಳಿಸಿದ್ದಾರೆ.

9- ಯಶ್ ದಯಾಳ್: ಸಿಎಸ್ಕೆ ವಿರುದ್ಧದ ಪಂದ್ಯದ ಗೆಲುವಿನ ರೂವಾರಿ ಎಡಗೈ ವೇಗಿ ಯಶ್ ದಯಾಳ್ ಈ ಬಾರಿ 13 ಪಂದ್ಯಗಳನ್ನಾಡಿದ್ದು, ಈ ವೇಳೆ 15 ವಿಕೆಟ್ಗಳನ್ನು ಕಬಳಿಸಿದ್ದಾರೆ.

10- ಮೊಹಮ್ಮದ್ ಸಿರಾಜ್: ಆರ್ಸಿಬಿ ಪರ 13 ಪಂದ್ಯಗಳನ್ನಾಡಿರುವ ಮೊಹಮ್ಮದ್ ಸಿರಾಜ್ 13 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

11- ಲಾಕಿ ಫರ್ಗುಸನ್: ಆರ್ಸಿಬಿ ಪರ 6 ಪಂದ್ಯಗಳನ್ನಾಡಿರುವ ವೇಗಿ ಲಾಕಿ ಫರ್ಗುಸನ್ ಈವರೆಗೆ 8 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ಫರ್ಗುಸನ್ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

12- ಮಹಿಪಾಲ್ ಲೋಮ್ರರ್: ಕಳೆದ ಕೆಲ ಪಂದ್ಯಗಳಿಂದ ಆರ್ಸಿಬಿ ಪರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮಹಿಪಾಲ್ ಲೋಮ್ರರ್ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ನಿರ್ಣಾಯಕ ಪಂದ್ಯದಲ್ಲೂ ಲೋಮ್ರರ್ ಇಂಪ್ಯಾಕ್ಟ್ ಸಬ್ ಆಗಿ ಬ್ಯಾಟಿಂಗ್ಗೆ ಆಗಮಿಸಬಹುದು.
Published On - 10:57 pm, Mon, 20 May 24



















