ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ಅನ್ನು RCB ಸೋಲಿನೊಂದಿಗೆ ಆರಂಭಿಸಿತ್ತು. ಮೊದಲ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಪರಾಜಯಗೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲಾರ್ಧದಲ್ಲಿ ಗೆದ್ದಿರುವುದು ಕೇವಲ 1 ಮ್ಯಾಚ್ ಮಾತ್ರ. ಅಂದರೆ 7 ಪಂದ್ಯಗಳಲ್ಲಿ 6 ಮ್ಯಾಚ್ಗಳಲ್ಲಿ ಸೋತು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿತ್ತು.
ಇನ್ನು ದ್ವಿತೀಯಾರ್ಧದ ಮೊದಲ ಪಂದ್ಯದಲ್ಲೂ ಆರ್ಸಿಬಿ ಗೆಲುವಿನ ಲಯಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ಹೀಗಾಗಿಯೇ ಎಲ್ಲರೂ ಆರ್ಸಿಬಿ ತಂಡದ ಪ್ಲೇಆಫ್ ಪ್ರವೇಶಿಸುವುದಿಲ್ಲ ಎಂದೇ ಭಾವಿಸಿದ್ದರು. ಏಕೆಂದರೆ ಮೇ 3 ರಂದು ಪ್ರಕಟವಾದ ಅಂಕ ಪಟ್ಟಿಯಲ್ಲಿ ಆರ್ಸಿಬಿ ತಂಡವು 10ನೇ ಸ್ಥಾನದಲ್ಲಿತ್ತು.
ಇದಾದ ಬಳಿಕ ಆರ್ಸಿಬಿ ತಂಡದ ಕಂಬ್ಯಾಕ್ ಮಾತ್ರ ಅದ್ಭುತ ಎನ್ನದೇ ವಿಧಿಯಿಲ್ಲ. ಏಕೆಂದರೆ ಕಳೆದ 15 ದಿನಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಕ್ ಟು ಬ್ಯಾಕ್ ಜಯ ಸಾಧಿಸಿ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದ್ದಾರೆ.
ಮೊದಲ 8 ಪಂದ್ಯಗಳಲ್ಲಿ ಕೇವಲ 1 ಜಯ ಸಾಧಿಸಿದ್ದ ಆರ್ಸಿಬಿ ಆ ಬಳಿಕ ಸತತ 6 ಗೆಲುವು ದಾಖಲಿಸಿ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಅದರಲ್ಲೂ ಪ್ಲೇಆಫ್ ನಿರೀಕ್ಷೆಯಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೊನೆಯ ಮ್ಯಾಚ್ನಲ್ಲಿ ಸೋಲುಣಿಸಿ ಇದೀಗ ಟಾಪ್-4 ಹಂತಕ್ಕೇರಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿ ಗ್ರೇಟೆಸ್ಟ್ ಕಂಬ್ಯಾಕ್ ಮಾಡಿದೆ.
ಈ ಮೂಲಕ ಆರ್ಸಿಬಿ ಪಾಲಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದೆ. ಇದೀಗ ಎಲಿಮಿನೇಟರ್ ಪಂದ್ಯಕ್ಕೆ ಅರ್ಹತೆ ಪಡೆದಿರುವ ಆರ್ಸಿಬಿ ಪಾಲಿಗೆ ಮತ್ತೊಂದು ಮಾಡು ಇಲ್ಲವೇ ಮಡಿ ಪಂದ್ಯ ಎದುರಾಗಿದೆ. ಮೇ 22 ರಂದು ಅಹಮದಾಬಾದ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ಕ್ವಾಲಿಫೈಯರ್-2 ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ಗೇರಲಿದೆಯಾ ಕಾದು ನೋಡಬೇಕಿದೆ.
Published On - 10:51 am, Sun, 19 May 24