ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ (IPL 2024) 68ನೇ ಪಂದ್ಯದಲ್ಲಿ ಸಿಎಸ್ಕೆ (CSK) ವಿರುದ್ಧ ಜಯ ಸಾಧಿಸಿ ಆರ್ಸಿಬಿ (RCB) ಪ್ಲೇಆಫ್ ಪ್ರವೇಶಿಸಿದೆ. ನಿರ್ಣಾಯಕವಾಗಿದ್ದ ಈ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಹೋರಾಟದಲ್ಲಿ ಅಂತಿಮ ಓವರ್ನಲ್ಲಿ ಆರ್ಸಿಬಿ ಗೆದ್ದು ಬೀಗಿದ್ದು ವಿಶೇಷ.
ಅದರಲ್ಲೂ ಕೊನೆಯ ಓವರ್ನಲ್ಲಿ ಪ್ಲೇಆಫ್ ಹಂತಕ್ಕೇರಲು ಸಿಎಸ್ಕೆ ತಂಡಕ್ಕೆ 17 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ದಾಳಿಗಿಳಿದ ಯಶ್ ದಯಾಳ್ ಅವರ ಮೊದಲ ಎಸೆತದಲ್ಲಿ ಮಹೇಂದ್ರ ಸಿಂಗ್ ಧೋನಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದರು. ಈ ಸಿಕ್ಸರ್ನಿಂದ ಆರ್ಸಿಬಿ ಗೆಲ್ಲುವಂತಾಗಿದ್ದು ವಿಶೇಷ.
ಅಂದರೆ ಧೋನಿ ಬಾರಿಸಿದ ಸಿಕ್ಸ್ 110 ಮೀಟರ್ ದೂರಕ್ಕೆ ಹೋಗಿದ್ದಲ್ಲದೆ, ಸ್ಟೇಡಿಯಂ ಛಾವಣಿಯನ್ನೂ ದಾಟಿತು. ಪರಿಣಾಮ ಅಂಪೈರ್ ಹೊಸ ಚೆಂಡನ್ನು ತರಿಸಿಕೊಂಡರು. ಈ ಮೂಲಕ ಪಂದ್ಯವನ್ನು ಮುಂದುವರೆಸಲಾಯಿತು.
ಈ ಮೊದಲು ಚೆಂಡು ಒದ್ದೆಯಾಗಿದೆ, ಹೊಸ ಬಾಲ್ ಅನ್ನು ನೀಡುವಂತೆ ನಾಯಕ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಅಂಪೈರ್ಗೆ ಹಲವು ಬಾರಿ ಮನವಿ ಮಾಡಿದ್ದರೂ, ಆ ಮನವಿಯನ್ನು ತಿರಸ್ಕರಿಸಿದ್ದರು. ಆದರೆ ಧೋನಿ ಬಾರಿಸಿದ ಚೆಂಡು ಕಳೆದು ಹೋಗಿದ್ದರಿಂದ ಈ ಬಾರಿ ಚೆಂಡನ್ನು ಬದಲಿಸಬೇಕಾದ ಅನಿವಾರ್ಯತೆ ಅಂಪೈರ್ ಮುಂದಿತ್ತು.
ಹೀಗಾಗಿ ಹೊಸ ಚೆಂಡನ್ನು ನೀಡಿದರು. ಹೊಸ ಬಾಲ್ನಲ್ಲಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದ ಯಶ್ ದಯಾಳ್, ಸ್ಲೋ ಬಾಲ್ ಮತ್ತು ಯಾರ್ಕರ್ ಎಸೆತಗಳೊಂದಿಗೆ ಸಿಎಸ್ಕೆ ಬ್ಯಾಟರ್ಗಳನ್ನು ನಿಯಂತ್ರಿಸುವಲ್ಲಿ ಸಫಲರಾದರು. ಪರಿಣಾಮ ಕೊನೆಯ ಓವರ್ನಲ್ಲಿ ಆರ್ಸಿಬಿ ಕೇವಲ 7 ರನ್ ಮಾತ್ರ ನೀಡಿ ಪ್ಲೇಆಫ್ಗೆ ಅರ್ಹತೆ ಗಿಟ್ಟಿಸಿಕೊಂಡಿತು.
ಹೀಗೆ ಅದೃಷ್ಟದಿಂದ ಬದಲಾದ ಚೆಂಡಿನಿಂದಾಗಿ ನಾವು ಗೆಲ್ಲಲು ಸಾಧ್ಯವಾಯಿತು ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ. ಆರ್ಸಿಬಿ ಡ್ರೆಸ್ಸಿಂಗ್ ರೂಮ್ನಲ್ಲಿ ಮಾತನಾಡಿದ ಡಿಕೆ, ಧೋನಿ ಮೈದಾನದ ಹೊರಗೆ ಸಿಕ್ಸ್ ಬಾರಿಸಿದ್ದು, ನಮ್ಮ ಪಾಲಿಗೆ ಅತ್ಯುತ್ತಮ ವಿಷಯ ಎಂದಿದ್ದಾರೆ. ಇದರಿಂದ ಚೆಂಡು ಬದಲಿಸಿದರು. ಅಲ್ಲದೆ ಹೊಸ ಚೆಂಡಿನೊಂದಿಗೆ ಯಶ್ ದಯಾಳ್ ಅದ್ಭುತವಾಗಿ ಬೌಲಿಂಗ್ ಮಾಡಿ ಆರ್ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟರು ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
Published On - 12:07 pm, Sun, 19 May 24