IPL 2024: ಬೆಂಚ್ ಬಿಸಿ ಮಾಡಿದ RCBಯ 47 ಕೋಟಿ ರೂ. ಆಟಗಾರರು..!
TV9 Web | Updated By: ಝಾಹಿರ್ ಯೂಸುಫ್
Updated on:
Apr 16, 2024 | 9:23 PM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) 17ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳಪೆ ಪ್ರದರ್ಶನ ನೀಡುತ್ತಿದೆ. ದುಬಾರಿ ಮೊತ್ತ ನೀಡಿ ಆರ್ಸಿಬಿ ಫ್ರಾಂಚೈಸಿ ಖರೀದಿಸಿದ ಆಟಗಾರರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ದುಬಾರಿಯಾಗುತ್ತಿದ್ದಾರೆ. ಹೀಗಾಗಿಯೇ ಈ ಆಟಗಾರರನ್ನು ಇದೀಗ ಪ್ಲೇಯಿಂಗ್ ಇಲೆವೆನ್ನಿಂದ ಕೈ ಬಿಡಲಾಗಿದೆ.
1 / 8
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್-17 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕಳಪೆ ಪ್ರದರ್ಶನ ಮುಂದುವರೆಸಿದೆ. ಮೊದಲಾರ್ಧದ 7 ಪಂದ್ಯಗಳಲ್ಲಿ ಆರ್ಸಿಬಿ ಗೆದ್ದಿರುವುದು ಕೇವಲ 1 ಪಂದ್ಯದಲ್ಲಿ ಮಾತ್ರ. RCB ತಂಡದ ಈ ಕಳಪೆ ಪ್ರದರ್ಶನಕ್ಕೆ ಸ್ಟಾರ್ ಆಟಗಾರರೇ ಕಾರಣ.
2 / 8
ಏಕೆಂದರೆ ಆರ್ಸಿಬಿ ತಂಡದಲ್ಲಿರುವ ಸ್ಟಾರ್ ಆಟಗಾರರು ಸಾಧಾರಣ ಪ್ರದರ್ಶನ ನೀಡುವಲ್ಲಿಯೂ ವಿಫಲರಾಗುತ್ತಿದ್ದಾರೆ. ಹೀಗಾಗಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಕೆಲ ಪ್ರಮುಖ ಆಟಗಾರರನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈ ಬಿಡಲಾಗಿತ್ತು. ಹೀಗೆ ಆಡುವ ಬಳಗದಿಂದ ಹೊರಬಿದ್ದ ಆಟಗಾರರಿಗೆ ನೀಡಲಾಗಿರುವ ಒಟ್ಟು ಮೊತ್ತ ಬರೋಬ್ಬರಿ 47 ಕೋಟಿ ರೂ. ಎಂದರೆ ನಂಬಲೇಬೇಕು.
3 / 8
ಅಂದರೆ ಆರ್ಸಿಬಿ ಫ್ರಾಂಚೈಸಿ ವ್ಯಯಿಸಿದ 100 ಕೋಟಿ ರೂ. ಹರಾಜು ಮೊತ್ತದಲ್ಲಿ 47 ಕೋಟಿ ರೂ. ಮೊತ್ತ ಪಡೆದಿರುವ ಆಟಗಾರರು ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ ಎಂಬುದೇ ಅಚ್ಚರಿ. ಇದು ಆರ್ಸಿಬಿ ಫ್ರಾಂಚೈಸಿಯ ಕಳಪೆ ಆಯ್ಕೆಗೆ ಹಿಡಿದ ಕನ್ನಡಿ ಎಂದರೆ ತಪ್ಪಾಗಲಾರದು.
4 / 8
ಏಕೆಂದರೆ ಆರ್ಸಿಬಿ ಫ್ರಾಂಚೈಸಿಯು ಈ ಬಾರಿ ಕ್ಯಾಮರೋನ್ ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ ತಂಡದಿಂದ ಟ್ರೇಡ್ ಮಾಡಿಕೊಂಡಿತ್ತು. ಅದು ಕೂಡ 17.5 ಕೋಟಿ ರೂ. ನೀಡುವ ಮೂಲಕ. ಇತ್ತ ಗ್ರೀನ್ 5 ಪಂದ್ಯಗಳಲ್ಲಿ ಕಣಕ್ಕಿಳಿದು ಕಲೆಹಾಕಿದ್ದು 68 ರನ್ಗಳು ಮಾತ್ರ. ಹಾಗೆಯೇ 67 ಎಸೆತಗಳಲ್ಲಿ 105 ರನ್ ನೀಡಿ ಕೇವಲ 2 ವಿಕೆಟ್ ಮಾತ್ರ ಪಡೆದಿದ್ದಾರೆ.
5 / 8
ಇನ್ನು ಈ ಬಾರಿಯ ಹರಾಜಿನಲ್ಲಿ ಆರ್ಸಿಬಿ 11.5 ಕೋಟಿ ರೂ. ನೀಡಿ ಖರೀದಿಸಿದ ವೇಗದ ಬೌಲರ್ ಅಲ್ಝಾರಿ ಜೋಸೆಫ್ 3 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 58 ಎಸೆತಗಳನ್ನು ಎಸೆದಿರುವ ಜೋಸೆಫ್ 115 ರನ್ ನೀಡಿ ಕೇವಲ 1 ವಿಕೆಟ್ ಮಾತ್ರ ಪಡೆದಿದ್ದಾರೆ.
6 / 8
ಈ ಬಾರಿಯ ಹರಾಜಿಗೂ ಮುನ್ನ 11 ಕೋಟಿ ರೂ. ನೀಡಿ ಉಳಿಸಿಕೊಂಡಿದ್ದ ಗ್ಲೆನ್ ಮ್ಯಾಕ್ಸ್ವೆಲ್ 6 ಪಂದ್ಯಗಳಿಂದ ಕಲೆಹಾಕಿದ ಒಟ್ಟು ಸ್ಕೋರ್ 32 ರನ್ಗಳು ಎಂದರೆ ನಂಬಲೇಬೇಕು. ಅಲ್ಲದೆ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ.
7 / 8
ಆರ್ಸಿಬಿ ಫ್ರಾಂಚೈಸಿ ಕಡೆಯಿಂದ 7 ಕೋಟಿ ರೂ. ಮೊತ್ತ ಪಡೆಯುತ್ತಿರುವ ಮೊಹಮ್ಮದ್ ಸಿರಾಜ್ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ ಎಸೆದ 132 ಎಸೆತಗಳಲ್ಲಿ ನೀಡಿರುವುದು ಬರೋಬ್ಬರಿ 229 ರನ್ಗಳು. ಇನ್ನು ಪಡೆದಿರುವುದು ಕೇವಲ 4 ವಿಕೆಟ್ ಮಾತ್ರ.
8 / 8
ಅಂದರೆ ಆರ್ಸಿಬಿ ಫ್ರಾಂಚೈಸಿ ಒಟ್ಟು 47 ಕೋಟಿ ರೂ. ನೀಡಿ ಖರೀದಿಸಿರುವ ಆಟಗಾರರು ಇದೀಗ ಬೆಂಚ್ ಕಾಯುತ್ತಿದ್ದಾರೆ. ಹೀಗೆ ಬೆಂಚ್ ಕಾಯಲು ಮುಖ್ಯ ಕಾರಣ ಕಳಪೆ ಪ್ರದರ್ಶನ. ಇವರಲ್ಲಿ ಅಲ್ಝಾರಿ ಜೋಸೆಫ್ ಹಾಗೂ ಕ್ಯಾಮರೋನ್ ಗ್ರೀನ್ ಕಳಪೆ ಫಾರ್ಮ್ನಲ್ಲಿರುವುದು ಗೊತ್ತಿದ್ದರೂ ಆರ್ಸಿಬಿ ಈ ಆಟಗಾರರಿಗೆ 29 ಕೋಟಿ ರೂ. ವ್ಯಯಿಸಿದ್ದು ಅಚ್ಚರಿಯೇ ಸರಿ. ಅದರ ಫಲವಾಗಿ ಇದೀಗ ದುಬಾರಿ ಆಟಗಾರರು ಬೆಂಚ್ ಬಿಸಿ ಮಾಡುತ್ತಿದ್ದಾರೆ.