ಐಪಿಎಲ್ನ (IPL 2024) 41ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ವಿರಾಟ್ ಕೊಹ್ಲಿ (Virat Kohli) ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಪಂದ್ಯದಲ್ಲಿ 43 ಎಸೆತಗಳನ್ನು ಎದುರಿಸಿದ ಕೊಹ್ಲಿ 51 ರನ್ ಬಾರಿಸಿದ್ದರು. ಈ ನಿಧಾನಗತಿಯ ಹಾಫ್ ಸೆಂಚುರಿಯಿಂದಾಗಿ ಕೊಹ್ಲಿ ಭಾರೀ ಟೀಕೆಗೆ ಗುರಿಯಾಗಿದ್ದರು.
ಇದೀಗ ಕೊಹ್ಲಿಯ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ. ಎಸ್ಆರ್ಹೆಚ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಇನಿಂಗ್ಸ್ನಲ್ಲಿ ಬರೀ ಸಿಂಗಲ್ಗಳೇ ಕಾಣಿಸಿದ್ದವು. ಸಿಂಗಲ್, ಸಿಂಗಲ್, ಸಿಂಗಲ್... ಹೀಗೆ ಒಂದೊಂದು ರನ್ ಕಲೆಹಾಕುತ್ತಾ ಇನಿಂಗ್ಸ್ ಕಟ್ಟಬೇಕಾದ ಅವಶ್ಯಕತೆ ಇರಲಿಲ್ಲ. ಇದಾಗ್ಯೂ ಕೊಹ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ್ದು ಅಚ್ಚರಿ ಮೂಡಿಸಿದೆ ಎಂದು ಗವಾಸ್ಕರ್ ಹೇಳಿದ್ದಾರೆ.
ಮಹಿಪಾಲ್ ಲೋಮ್ರರ್, ದಿನೇಶ್ ಕಾರ್ತಿಕ್ ಅವರಂತಹ ಬಿಗ್ ಹಿಟ್ಟರ್ಗಳು ಬ್ಯಾಟಿಂಗ್ಗೆ ಬರಬೇಕಿತ್ತು. ಹೀಗಾಗಿ ವಿರಾಟ್ ಕೊಹ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಬಹುದಿತ್ತು. ಕೊಹ್ಲಿ ಸ್ವಲ್ಪ ರಿಸ್ಕ್ ತೆಗೆದುಕೊಂಡು ಧೈರ್ಯದಿಂದ ಆಡಬೇಕು ಎಂದು ಸುನಿಲ್ ಗವಾಸ್ಕರ್ ಕಿವಿಮಾತು ಹೇಳಿದ್ದಾರೆ.
ನೀವೇ ನೋಡಿ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಅರ್ಧಶತಕ ಪೂರೈಸಲು 37 ಎಸೆತಗಳನ್ನು ತೆಗೆದುಕೊಂಡಿದ್ದರು. ಇದೇ ವೇಳೆ ರಜತ್ ಪಾಟಿದಾರ್ ಕೇವಲ 19 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದರು. ಬ್ಯಾಟರ್ಗಳು ರಿಸ್ಕ್ ತೆಗೆದುಕೊಳ್ಳದ ಹೊರತು ಆಕ್ರಮಕಾರಿ ಆಟ ಪ್ರದರ್ಶಿಸಲು ಸಾಧ್ಯವಾಗುವುದಿಲ್ಲ. ಈ ಮೂಲಕ ಬೌಲರ್ಗಳ ವಿರುದ್ಧ ಮೇಲುಗೈ ಸಾಧಿಸಬೇಕಿದೆ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಮೊದಲ 18 ಎಸೆತಗಳಲ್ಲಿ 32 ರನ್ ಬಾರಿಸಿ ಅಬ್ಬರಿಸಿದ್ದರು. ಆದರೆ ಪವರ್ಪ್ಲೇ ಮುಕ್ತಾಯವಾಗುತ್ತಿದ್ದಂತೆ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್ಗೆ ಒತ್ತು ನೀಡಿದರು. ಪರಿಣಾಮ ಮುಂದಿನ 25 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 19 ರನ್ಗಳು ಮಾತ್ರ. ಹೀಗಾಗಿಯೇ ಆರ್ಸಿಬಿ ಬೃಹತ್ ಮೊತ್ತ ಪೇರಿಸಬೇಕಿದ್ದರೆ ಕೊಹ್ಲಿ ಸ್ಪೋಟಕ ಬ್ಯಾಟಿಂಗ್ಗೆ ಒತ್ತು ನೀಡಬೇಕೆಂದು ಸುನಿಲ್ ಗವಾಸ್ಕರ್ ಒತ್ತಿ ಹೇಳಿದ್ದಾರೆ.