ಇಂಡಿಯನ್ ಪ್ರೀಮಿಯರ್ ಲೀಗ್ನ ಅತ್ಯಂತ ಯಶಸ್ವಿ ಫ್ರಾಂಚೈಸಿಯಾದ ಮುಂಬೈ ಇಂಡಿಯನ್ಸ್ 2024ರ ಆವೃತ್ತಿ ಆರಂಭಕ್ಕೂ ಮುನ್ನ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಿದೆ.
ಐಪಿಎಲ್-2024 ರ ಸೀಸನ್‌ಗಾಗಿ ಇಬ್ಬರು ದಿಗ್ಗಜ ಕ್ರಿಕೆಟಿಗರನ್ನು ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್ ಕೋಚ್‌ಗಳಾಗಿ ನೇಮಿಸಿಕೊಂಡಿದೆ. ಇವರಿಬ್ಬರೂ ಈ ಹಿಂದೆ ಮುಂಬೈ ಇಂಡಿಯನ್ಸ್ ಪರ ಆಡಿರುವುದು ಗಮನಾರ್ಹವಾಗಿದೆ.
ಮುಂಬೈ ಫ್ರಾಂಚೈಸಿ ಈಗಾಗಲೇ ವೆಸ್ಟ್ ಇಂಡೀಸ್ ಮಾಜಿ ಆಲ್ ರೌಂಡರ್ ಕೀರನ್ ಪೊಲಾರ್ಡ್ ಅವರ ಹೆಸರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಿಕೊಂಡಿತ್ತು. ಈ ಕ್ರಮದಲ್ಲಿ ಶ್ರೀಲಂಕಾದ ದಿಗ್ಗಜ ವೇಗಿ ಲಸಿತ್ ಮಾಲಿಂಗ ಅವರನ್ನು ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡಿಕೊಂಡಿದೆ
ಈ ಬಗ್ಗೆ ಪ್ರತಿಕ್ರಿಯಿಸಿದ ಬೌಲಿಂಗ್ ಕೋಚ್ ಮಾಲಿಂಗ, ‘‘ನನ್ನ ಪ್ರಯಾಣ ಈಗಾಗಲೇ ಎಂಐ ನ್ಯೂಯಾರ್ಕ್ ಮತ್ತು ಎಂಐ ಕೇಪ್ ಟೌನ್ನಲ್ಲಿ ಆರಂಭವಾಗಿದೆ. ಇದೀಗ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿರುವುದು ಸಂತಸ ತಂದಿದೆ.
ಪೊಲಾರ್ಡ್, ರೋಹಿತ್, ಮಾರ್ಕ್ ಜೊತೆಗೆ ಇಡೀ ತಂಡದೊಂದಿಗೆ ಇನ್ನಷ್ಟು ನಿಕಟ ಬಾಂಧವ್ಯದ ಅವಕಾಶ ಸಿಗಲಿದೆ. ವಿಶೇಷವಾಗಿ ಬೌಲಿಂಗ್ ವಿಭಾಗದೊಂದಿಗೆ ನಾನು ಹೊಸ ಸಂಪರ್ಕವನ್ನು ಪಡೆಯುತ್ತೇನೆ. ಪ್ರತಿಭಾನ್ವಿತ ಯುವ ಬೌಲರ್‌ಗಳಿಗೆ ಮಾರ್ಗದರ್ಶನ ನೀಡುತ್ತಿರುವುದು ಗೌರವದ ಸಂಗತಿ ಎಂದಿದ್ದಾರೆ.
ವಾಸ್ತವವಾಗಿ ಈ ಹಿಂದೆ ಮುಂಬೈ ತಂಡದ ಬೌಲಿಂಗ್ ಕೋಚ್ ಆಗಿ ಶೇನ್ ಬಾಂಡ್ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಅವರೊಂದಿಗಿನ ಒಪ್ಪಂದನ್ನು ಫ್ರಾಂಚೈಸಿ ಮುರಿದುಕೊಂಡಿದೆ. ಹೀಗಾಗಿ ಲಸಿತ್ ಮಾಲಿಂಗ, ಶೇನ್ ಬಾಂಡ್ ಬದಲಿಗೆ ತಂಡ ಸೇರಿಕೊಂಡಿದ್ದಾರೆ.
ಇನ್ನು ಮಾಲಿಂಗ ಕೂಡ 2008 ರಿಂದ 2020 ರವರೆಗೆ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಈ ತಂಡದ ಪರ 122 ಪಂದ್ಯಗಳನ್ನು ಆಡಿರುವ ಮಾಲಿಂಗ, 170 ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ.
ಅದೇ ರೀತಿ, 2013, 2015, 2017 ಮತ್ತು 2019 ರಲ್ಲಿ ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ಸದಸ್ಯರಾಗಿರುವ ಮಾಲಿಂಗ ನಾಲ್ಕು ಪ್ರಶಸ್ತಿಗಳನ್ನು ಹೊಂದಿದ್ದಾರೆ. 2021 ರಲ್ಲಿ ಆಟಗಾರನಾಗಿ ನಿವೃತ್ತರಾದ ನಂತರ, ಮಾಲಿಂಗ ಬೌಲಿಂಗ್ ಕೋಚ್ ಆದರು.
ಬಳಿಕ 2022 ಮತ್ತು 2023 ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ವೇಗದ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದ ಮಾಲಿಂಗ ಇದೀಗ ಮುಂಬೈ ಪಾಳಕ್ಕೆ ಪುನರಾಗಮನ ಮಾಡಲಿದ್ದಾರೆ.