
ಐಪಿಎಲ್ 2024 ರ 58 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಬಿರುಸಿನ ಇನ್ನಿಂಗ್ಸ್ ಆಡಿದರು. ಧರ್ಮಶಾಲಾದಲ್ಲಿ ಆಲಿಕಲ್ಲು ಮಳೆಯ ನಂತರ, ವಿರಾಟ್ ಕೊಹ್ಲಿ ರನ್ಗಳ ಮಳೆ ಸುರಿಸಿದರು.

ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ಕೇವಲ 47 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್ ಸಹಿತ 92 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಆದರೆ ಕೇವಲ 8 ರನ್ಗಳಿಂದ ಶತಕ ವಂಚಿತರಾದರು. ಅದಾಗ್ಯೂ ಈ ಪಂದ್ಯದಲ್ಲಿ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದರು.

ವಾಸ್ತವವಾಗಿ ಈ ಪಂದ್ಯದಲ್ಲಿ ಕೊಹ್ಲಿಗೆ ಬರೋಬ್ಬರಿ 2 ಜೀವದಾನಗಳು ಸಿಕ್ಕವು. ಇನ್ನಿಂಗ್ಸ್ ಆರಂಭದಲ್ಲೇ ಕೊಹ್ಲಿ ಶೂನ್ಯಕ್ಕೆ ಔಟಾಗಬೇಕಿತ್ತು. ಆದರೆ ಅಶುತೋಷ್ ಕ್ಯಾಚ್ ಕೈಚೆಲ್ಲಿದರು. ಆ ಬಳಿಕವೂ ಕೊಹ್ಲಿ 10 ರನ್ ಬಾರಿಸಿದ್ದಾಗ ರುಸ್ಸೋ ಮತ್ತೊಂದು ಕ್ಯಾಚ್ ಕೈಚೆಲ್ಲುವ ಮೂಲಕ ಎರಡನೇ ಜೀವದಾನ ನೀಡಿದರು.

ಹೀಗೆ ಈ ಪಂದ್ಯದಲ್ಲಿ ಎರಡೆರಡು ಜೀವದಾನಗಳ ಲಾಭ ಪಡೆದ ಕೊಹ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ದಾಖಲೆಗಳ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್ ಮೂಲಕ ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 1000 ರನ್ ಪೂರೈಸಿದರು. ಇದುರೊಂದಿಗೆ ಅತಿ ಹೆಚ್ಚು ಎದುರಾಳಿ ತಂಡಗಳ ವಿರುದ್ಧ 1000 ಕ್ಕೂ ಹೆಚ್ಚು ರನ್ ದಾಖಲಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಪಂಜಾಬ್ ಕಿಂಗ್ಸ್ ಹೊರತುಪಡಿಸಿ, ವಿರಾಟ್ ಕೊಹ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1000+ ರನ್ ಗಳಿಸಿದ್ದಾರೆ. ಕೊಹ್ಲಿ ಡೆಲ್ಲಿ ವಿರುದ್ಧ 1030 ರನ್, ಪಂಜಾಬ್ ವಿರುದ್ಧ 1020 ರನ್ ಮತ್ತು ಸಿಎಸ್‌ಕೆ ವಿರುದ್ಧ 1006 ರನ್ ಬಾರಿಸಿದ್ದಾರೆ.

ಇವರಲ್ಲದೆ, ರೋಹಿತ್ ಶರ್ಮಾ (ದೆಹಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್) ಮತ್ತು ಡೇವಿಡ್ ವಾರ್ನರ್ (ಕೋಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್) ತಲಾ 2 ಎದುರಾಳಿ ತಂಡಗಳ ವಿರುದ್ಧ 1000 ಕ್ಕೂ ಹೆಚ್ಚು ರನ್ ದಾಖಲಿಸಿದ್ದಾರೆ.

ಈ ಸೀಸನ್ನಲ್ಲಿ ಕೊಹ್ಲಿ ಇಲ್ಲಿಯವರೆಗೆ ಒಟ್ಟು 634 ರನ್ ಬಾರಿಸಿದ್ದಾರೆ. ಇದರೊಂದಿಗೆ ಐಪಿಎಲ್‌ನ ಹೆಚ್ಚಿನ ಸೀಸನ್‌ಗಳಲ್ಲಿ ಜಂಟಿಯಾಗಿ 600ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇವರಲ್ಲದೆ ಕೆಎಲ್ ರಾಹುಲ್ ಕೂಡ ಈ ಸಾಧನೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಐಪಿಎಲ್ 2013, 2016, 2023ರಲ್ಲಿ 600ಕ್ಕೂ ಹೆಚ್ಚು ರನ್ ಬಾರಿಸಿದ್ದರು. ಇವರಲ್ಲದೆ, ಕ್ರಿಸ್ ಗೇಲ್ ಮತ್ತು ಡೇವಿಡ್ ವಾರ್ನರ್ ತಲಾ 3 ಸೀಸನ್‌ಗಳಲ್ಲಿ 600+ ರನ್ ಬಾರಿಸಿದ್ದರೆ, ಫಾಫ್ ಡು ಪ್ಲೆಸಿಸ್ 2 ಸೀಸನ್‌ಗಳಲ್ಲಿ 600+ ರನ್ ದಾಖಲಿಸಿದ್ದಾರೆ.

ಈ ಪಂದ್ಯದಲ್ಲಿ 6 ಸಿಕ್ಸರ್ ಬಾರಿಸಿದ ವಿರಾಟ್ ಕೊಹ್ಲಿ ಇದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ 400 ಸಿಕ್ಸರ್‌ಗಳನ್ನು ಪೂರೈಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಕೊಹ್ಲಿ 388 ಪಂದ್ಯಗಳ 371 ಇನ್ನಿಂಗ್ಸ್‌ಗಳಲ್ಲಿ 401 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
Published On - 10:56 pm, Thu, 9 May 24