
ಐಪಿಎಲ್ 2025 ರಲ್ಲಿ ಇಲ್ಲಿಯವರೆಗೆ 50 ಪಂದ್ಯಗಳು ನಡೆದಿವೆ. ಇದರೊಂದಿಗೆ ಪ್ಲೇಆಫ್ ತಲುಪುವ 4 ತಂಡಗಳು ಯಾವುವು ಎಂಬುದರ ಮೇಲೆಯೂ ಕುತೂಹಲ ಹೆಚ್ಚಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಹೊರತುಪಡಿಸಿ, ಇತರ ಎಲ್ಲಾ 8 ತಂಡಗಳಿಗೂ ಪ್ಲೇಆಫ್ ತಲುಪುವ ಅವಕಾಶವಿದೆ. ಆದರೆ ಸಿಎಸ್‌ಕೆ ಮತ್ತು ಆರ್‌ಆರ್ ತಂಡಗಳು ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಗುಳಿದಿವೆ.

ಇದನ್ನು ಹೊರತುಪಡಿಸಿ ಈ ಸೀಸನ್‌ನಲ್ಲಿ ಹಲವು ಸ್ಮರಣೀಯ ಘಟನೆಗಳು ನಡೆದಿವೆ. ಅದರಲ್ಲೂ ಈ ಆವೃತ್ತಿಯಲ್ಲಿ ಯುವ ಭಾರತೀಯ ಕ್ರಿಕೆಟಿಗರು ಅಮೋಘ ಪ್ರದರ್ಶನ ನೀಡುತ್ತಿರುವುದು ಸಂತಸದ ಸುದ್ದಿಯಾಗಿದೆ. ಇದುವರೆಗೆ ಈ ಸೀಸನ್‌ನಲ್ಲಿ 4 ಶತಕಗಳು ದಾಖಲಾಗಿವೆ. ಅತ್ಯಂತ ವಿಶೇಷವೆಂದರೆ ಈ ನಾಲ್ಕು ಶತಕಗಳನ್ನೂ ಎಡಗೈ ಬ್ಯಾಟ್ಸ್‌ಮನ್‌ಗಳು ಬಾರಿಸಿದ್ದಾರೆ. ಇದರಲ್ಲಿ, ಶೂನ್ಯದೊಂದಿಗೆ ವಿಶೇಷ ಸಂಬಂಧ ಹೊಂದಿರುವ ಮೂವರು ಬ್ಯಾಟ್ಸ್‌ಮನ್‌ಗಳಿದ್ದಾರೆ.

ಮೇಲೆ ಹೇಳಿದಂತೆ ಈ ಸೀಸನ್‌ನಲ್ಲಿ ವಿವಿಧ ತಂಡಗಳ ನಾಲ್ವರು ಎಡಗೈ ಬ್ಯಾಟ್ಸ್‌ಮನ್‌ಗಳು ಶತಕಗಳನ್ನು ಗಳಿಸಿದ್ದಾರೆ. ಇದರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅವರ ಹೆಸರುಗಳು ಸೇರಿವೆ.

ಇವರಲ್ಲದೆ, ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ 14 ವರ್ಷದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಕೂಡ ಈ ಸೀಸನ್‌ನಲ್ಲಿ ಶತಕಗಳನ್ನು ಗಳಿಸಿದ್ದಾರೆ. ಈ ಮೂವರು ಶತಕ ಬಾರಿಸುವ ಮೊದಲು ಅಥವಾ ನಂತರ ಡಕ್ ಔಟ್ ಆಗಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ಪರ ಮೊದಲ ಬಾರಿಗೆ ಆಡುತ್ತಿರುವ ಇಶಾನ್ ಕಿಶನ್, ತಮ್ಮ ಮೊದಲ ಪಂದ್ಯದಲ್ಲೇ ಶತಕ ಗಳಿಸಿದರು. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅವರು 47 ಎಸೆತಗಳಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ ಅಜೇಯ 106 ರನ್ ಗಳಿಸಿದರು. ಇದು ಈ ಸೀಸನ್‌ನ ಮೊದಲ ಶತಕವಾಗಿತ್ತು. ಆದರೆ ಮುಂದಿನ ಪಂದ್ಯದಲ್ಲಿ ಇಶಾನ್ ಕಿಶನ್ ಗೋಲ್ಡನ್ ಡಕ್‌ಗೆ ಬಲಿಯಾದರು. ಅಲ್ಲದೆ ಶತಕದ ಬಳಿಕ ಕಿಶನ್ ಬ್ಯಾಟ್ ಇದುವರೆಗೆ ಮೌನಕ್ಕೆ ಶರಣಾಗಿದೆ

ಪಂಜಾಬ್ ಕಿಂಗ್ಸ್ ತಂಡದ ಯುವ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ ಈ ಸೀಸನ್‌ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ. ಅವರು ತಮ್ಮ ಮೊದಲ ಐಪಿಎಲ್ ಸೀಸನ್ನಲ್ಲಿಯೇ ಶತಕ ಗಳಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಈ ಆವೃತ್ತಿಯ ಮೂರನೇ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೋಲ್ಡನ್ ಡಕ್‌ಗೆ ಬಲಿಯಾದರು.

ಆದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಅಮೋಘ ಇನ್ನಿಂಗ್ಸ್ ಆಡಿದ ಪ್ರಿಯಾಂಶ್ 42 ಎಸೆತಗಳಲ್ಲಿ 7 ಬೌಂಡರಿ ಮತ್ತು 9 ಸಿಕ್ಸರ್‌ಗಳ ಸಹಾಯದಿಂದ 103 ರನ್ ಕಲೆಹಾಕಿದರು. ಈ ಶತಕದ ಬಳಿಕವೂ ಪ್ರಿಯಾಂಶ್ ಅವರ ಬ್ಯಾಟ್ನಿಂದ ರನ್‌ಗಳ ಮಳೆ ಸುರಿಯುತ್ತಿದೆ.

ಐಪಿಎಲ್‌ನಲ್ಲಿ ಆಡುತ್ತಿರುವ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ದಾಖಲೆ ಬರೆದಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ತಮ್ಮ ಮೂರನೇ ಪಂದ್ಯದಲ್ಲಿಯೇ ಅಬ್ಬರದ ಶತಕ ಬಾರಿಸಿದರು. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವೈಭವ್ ಕೇವಲ 38 ಎಸೆತಗಳಲ್ಲಿ 7 ಬೌಂಡರಿ ಮತ್ತು 11 ಸಿಕ್ಸರ್‌ಗಳ ಸಹಾಯದಿಂದ 101 ರನ್‌ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದರು.

ಈ ಮೂಲಕ ಐಪಿಎಲ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಲ್ಲದೆ, ಈ ಶತಕವು ಐಪಿಎಲ್ ಇತಿಹಾಸದಲ್ಲಿ ಎರಡನೇ ವೇಗದ ಶತಕ ಎಂಬ ದಾಖಲೆಯನ್ನು ಬರೆಯಿತು. ಆದರೆ ಈ ಶತಕದ ನಂತರ ಆಡಿದ ಮುಂಬೈ ಇಂಡಿಯನ್ಸ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಅವರು ಸೊನ್ನೆಗೆ ಬಲಿಯಾದರು. ಐಪಿಎಲ್ 2025 ರಲ್ಲಿ ಅವರು ಶೂನ್ಯಕ್ಕೆ ಔಟಾಗಿರುವುದು ಇದೇ ಮೊದಲು.
Published On - 6:57 pm, Fri, 2 May 25