
17 ವರ್ಷ, 17 ಸೀಸನ್, ಒಂದೇ ತಂಡ, ಒಂದೇ ಗುರಿ... ಇದುವೇ ವಿರಾಟ್ ಕೊಹ್ಲಿಯ ಬಹುದೊಡ್ಡ ಕನಸು. ಹೌದು, ಕಳೆದ ಹದಿನೇಳು ಸೀಸನ್ಗಳಿಂದ ಆರ್ಸಿಬಿ ಪರ ಕಣಕ್ಕಿಳಿದಿರುವ ವಿರಾಟ್ ಕೊಹ್ಲಿ ಇದೀಗ 18ನೇ ಆವೃತ್ತಿಗಾಗಿ ಸಜ್ಜಾಗಿ ನಿಂತಿದ್ದಾರೆ. ಅದು ಸಹ ಈ ಸಲ ಆದರೂ ಕಪ್ ಗೆಲ್ಲಬೇಕೆಂಬ ಮಹದಾಸೆಯೊಂದಿಗೆ ಎಂಬುದು ವಿಶೇಷ.

ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಆರ್ಸಿಬಿ ಫ್ರಾಂಚೈಸಿ ಬರೋಬ್ಬರಿ 21 ಕೋಟಿ ರೂ. ನೀಡಿ ವಿರಾಟ್ ಕೊಹ್ಲಿಯನ್ನು ಉಳಿಸಿಕೊಂಡಿದೆ. ಇದರೊಂದಿಗೆ ಕಿಂಗ್ ಕೊಹ್ಲಿ ಆರ್ಸಿಬಿ ಪರ 18ನೇ ಸೀಸನ್ ಆಡುವುದು ಕೂಡ ಖಚಿತವಾಗಿದೆ. ಅಷ್ಟೇ ಅಲ್ಲದೆ ಮುಂದಿನ ಮೂರು ಆವೃತ್ತಿಗಳಲ್ಲೂ ಅವರು ಬೆಂಗಳೂರು ಫ್ರಾಂಚೈಸಿಯಲ್ಲೇ ಉಳಿಯಲಿದ್ದಾರೆ. ಇದನ್ನು ಖುದ್ದು ವಿರಾಟ್ ಕೊಹ್ಲಿಯೇ ಖಚಿತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ವಿರಾಟ್ ಕೊಹ್ಲಿ, ಒಂದು ತಂಡಕ್ಕಾಗಿ ಇಷ್ಟು ವರ್ಷ ಆಡಲಿದ್ದೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಆದರೆ ಈ ಸಂಬಂಧವು ಹಲವು ವರ್ಷಗಳಿಂದ ಮುಂದುವರೆದಿದೆ. ಇದು ನಿಜಕ್ಕೂ ನನ್ನ ಪಾಲಿಗೆ ತುಂಬಾ ವಿಶೇಷ ಅನುಭವ. ನನ್ನ ವೃತ್ತಿಜೀವನದ ಅಂತ್ಯದ ವೇಳೆಗೆ 20 ವರ್ಷಗಳು ಪೂರ್ಣಗೊಳ್ಳಲಿದೆ. ಈ 20 ವರ್ಷಗಳನ್ನು ನಾನು ಆರ್ಸಿಬಿ ಪರವಾಗಿಯೇ ಕಣಕ್ಕಿಳಿಯಲಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಅಂದರೆ ವಿರಾಟ್ ಕೊಹ್ಲಿ ಐಪಿಎಲ್ 2027ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೇ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಆದರೆ ಆ ಬಳಿಕ ಅವರು ನಿವೃತ್ತಿ ನೀಡುವ ಸಾಧ್ಯತೆಯಿದೆ. ಇದೇ ಕಾರಣದಿಂದಾಗಿ ಅವರು ವೃತ್ತಿಜೀವನದ ಅಂತ್ಯದ ವೇಳೆಗೆ 20 ವರ್ಷಗಳನ್ನು ಪೂರ್ಣಗೊಳಿಸಲಿದ್ದೇನೆ ಎಂದು ಒತ್ತಿ ಹೇಳಿದ್ದಾರೆ.

35 ವರ್ಷದ ವಿರಾಟ್ ಕೊಹ್ಲಿಗೆ 2027ರ ವೇಳೆಗೆ 38 ವರ್ಷ ತುಂಬಲಿದೆ. ಇದೇ ಅವಧಿಯಲ್ಲಿ ಕಿಂಗ್ ಕೊಹ್ಲಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳುವ ಸಾಧ್ಯತೆಯಿದೆ. ಹೀಗಾಗಿಯೇ ಮುಂದಿನ ಮೂರು ವರ್ಷಗಳಲ್ಲಿ ಆರ್ಸಿಬಿಗೆ ಕಪ್ ಗೆದ್ದುಕೊಡಬೇಕೆಂಬ ಮಹದಾಸೆಯನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ. ಈ ಮೂಲಕ ತಮ್ಮ 17 ವರ್ಷಗಳ ಕನಸನ್ನು ನನಸು ಮಾಡಿಕೊಳ್ಳುವ ಇರಾದೆಯಲ್ಲಿದ್ದಾರೆ. ಕಿಂಗ್ ಕೊಹ್ಲಿಯ ಈ ಕನಸು ಐಪಿಎಲ್ 2025 ರಲ್ಲೇ ನನಸಾಗಲಿದೆಯಾ ಕಾದು ನೋಡಬೇಕಿದೆ.