2025 ರ ಐಪಿಎಲ್ ಮೆಗಾ ಹರಾಜಿನ ಮೊದಲು, ಮುಂಬೈ ಇಂಡಿಯನ್ಸ್ ತಂಡದಲ್ಲಿ ದೊಡ್ಡ ಬದಲಾವಣೆಯಾಗಿದೆ. ಅದರಂತೆ 2023 ರಲ್ಲಿ ಮುಖ್ಯ ಕೋಚ್ ಹುದ್ದೆಗೆ ಆಯ್ಕೆಯಾಗಿದ್ದ ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಾರ್ಕ್ ಬೌಚರ್ ಅವರನ್ನು ಈ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಇದೀಗ ಅವರ ಸ್ಥಾನಕ್ಕೆ ಲಂಕಾದ ಮಾಜಿ ನಾಯಕನ ಆಗಮನವಾಗಿದೆ.
ವಾಸ್ತವವಾಗಿ 2017 ರಿಂದ 2022 ರವರೆಗೆ ಸತತ 6 ಸೀಸನ್‌ಗಳಲ್ಲಿ ಮುಂಬೈ ಇಂಡಿಯನ್ಸ್‌ನ ಮುಖ್ಯ ಕೋಚ್ ಆಗಿದ್ದ ಮಹೇಲಾ ಜಯವರ್ಧನೆ ಅವರನ್ನು ಮತ್ತೆ ತಂಡದ ಮುಖ್ಯ ಕೋಚ್ ಆಗಿ ಮುಂಬೈ ಫ್ರಾಂಚೈಸಿ ನೇಮಿಸಿದೆ. ಜಯವರ್ಧನೆ ತರಬೇತಿಯಲ್ಲಿ ಮುಂಬೈ ತಂಡ 3 ಬಾರಿ ಚಾಂಪಿಯನ್ ಆಗಿರುವುದೇ ಅವರ ಪುನರ್ ಆಯ್ಕೆಗೆ ಪ್ರಮುಖ ಕಾರಣವಾಗಿದೆ.
ಮಹೇಲಾ ಜಯವರ್ಧನೆ ಈ ಹಿಂದೆ 2017 ರಿಂದ 2022 ರವರೆಗೆ ತಂಡದ ನಾಯಕರಾಗಿದ್ದರು. ಜಯವರ್ಧನೆ ನಾಯಕತ್ವದಲ್ಲಿ ಮುಂಬೈ ಮೂರು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿತ್ತು. 2017ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡವನ್ನು ಸೋಲಿಸಿ ಮುಂಬೈ ಪ್ರಶಸ್ತಿ ಗೆದ್ದುಕೊಂಡಿತ್ತು.
2019 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸುವ ಮೂಲಕ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿತು. ನಂತರ 2020 ರಲ್ಲಿ ಮುಂಬೈ, ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಐದನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿತು. ಹೀಗಾಗಿ ಮತ್ತೊಮ್ಮೆ ಜಯವರ್ಧನೆಗೆ ತಂಡದ ಸಾರಥ್ಯ ನೀಡಲು ಫ್ರಾಂಚೈಸ್ ಮುಂದಾಗಿದೆ.
ಇನ್ನು 2023 ರಲ್ಲಿ ಮುಖ್ಯ ಕೋಚ್ ಹುದ್ದೆಗೇರಿದ್ದ ದಕ್ಷಿಣ ಆಫ್ರಿಕಾದ ಅನುಭವಿ ಮಾರ್ಕ್ ಬೌಚರ್ ಅವರ ಅಧಿಕಾರಾವಧಿಯಲ್ಲಿ ತಂಡದ ಪ್ರದರ್ಶನವು ತುಂಬಾ ಕಳಪೆಯಾಗಿತ್ತು. ಅದರಲ್ಲೂ ಕಳೆದ ಸೀಸನ್‌ನಲ್ಲಿ ಹಾರ್ದಿಕ್ ಪಾಂಡ್ಯ ವಾಪಸಾತಿ ಮತ್ತು ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ನಂತರ ಉಂಟಾದ ವಿವಾದವು ಫ್ರಾಂಚೈಸಿಯನ್ನು ಸೀಸನ್ ಉದ್ದಕ್ಕೂ ಮುಖ್ಯಾಂಶಗಳಲ್ಲಿ ಇರಿಸಿತ್ತು.
ಮೈದಾನದಲ್ಲಿ ತಂಡದ ನಿರಂತರ ಕಳಪೆ ಪ್ರದರ್ಶನದ ಪರಿಣಾಮ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ನಿಂತಿತು. ಹಾರ್ದಿಕ್ ನಾಯಕತ್ವದಲ್ಲಿ ತಂಡ ಆಡಿದ 14 ಪಂದ್ಯಗಳಲ್ಲಿ 4ರಲ್ಲಿ ಮಾತ್ರ ಗೆಲುವು ಸಾಧಿಸಿದ್ದರೆ, 10 ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು.
ಹೀಗಾಗಿ ಮತ್ತೆ ಜಯದ ಲಯಕ್ಕೆ ಮರಳಲು ಮುಂಬೈ ಫ್ರಾಂಚೈಸಿ ಈ ಮಹತ್ವದ ಹೆಜ್ಜೆ ಇಟ್ಟಿದೆ. ಮುಂಬೈ ತಂಡವು 2020 ರಲ್ಲಿ ಕೊನೆಯ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿತ್ತು. ಇದಾದ ಬಳಿಕ ಕಳೆದ ನಾಲ್ಕು ವರ್ಷಗಳಲ್ಲಿ ತಂಡದ ಪ್ರದರ್ಶನ ವಿಶೇಷವೇನೂ ಆಗಿಲ್ಲ. ಇದರ ನಡುವೆ ಮೆಗಾ ಹರಾಜಿಗೂ ಮುನ್ನ ಮುಂಬೈ ತಂಡ ಯಾವ ಆಟಗಾರರನ್ನು ಉಳಿಸಿಕೊಂಡಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ಬಾರಿ ರೋಹಿತ್ ಶರ್ಮಾ ಮುಂಬೈ ತೊರೆದು ಹರಾಜಿನಲ್ಲಿ ಕಾಣಿಸಿಕೊಳ್ಳಬಹುದು ಎಂದು ಊಹಿಸಲಾಗಿದೆ.