
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಶೀದ್ ಖಾನ್ (Rashid Khan) ಅತ್ಯಂತ ಕಳಪೆ ದಾಖಲೆ ಬರೆದಿದ್ದಾರೆ. ಅದು ಕೂಡ ಸಿಕ್ಸರ್ ಚಚ್ಚಿಸಿಕೊಳ್ಳುವ ಮೂಲಕ. ಅಂದರೆ ಐಪಿಎಲ್ ಇತಿಹಾಸದಲ್ಲೇ ಒಂದೇ ಸೀಸನ್ನಲ್ಲಿ ಅತ್ಯಧಿಕ ಸಿಕ್ಸರ್ ಹೊಡೆಸಿಕೊಂಡ ಬೌಲರ್ ಎಂಬ ಹೀನಾಯ ದಾಖಲೆಯೊಂದು ರಶೀದ್ ಖಾನ್ ಪಾಲಾಗಿದೆ.

ಐಪಿಎಲ್ 2025ರ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 4 ಓವರ್ಗಳನ್ನು ಎಸೆದಿದ್ದ ರಶೀದ್ ಖಾನ್ ಒಟ್ಟು 31 ರನ್ ಬಿಟ್ಟುಕೊಟ್ಟಿದ್ದರು. ಈ 31 ರನ್ಗಳಲ್ಲಿ 2 ಸಿಕ್ಸ್ಗಳು ಒಳಗೊಂಡಿದ್ದವು. ಇದರೊಂದಿಗೆ ಐಪಿಎಲ್ ಸೀಸನ್ವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಹೊಡೆಸಿಕೊಂಡ ಅನಗತ್ಯ ದಾಖಲೆಯು ರಶೀದ್ ಖಾನ್ ಪಾಲಾಯಿತು.

ಇದಕ್ಕೂ ಮುನ್ನ ಇಂತಹದೊಂದು ಕಳಪೆ ದಾಖಲೆ ಮೊಹಮ್ಮದ್ ಸಿರಾಜ್ ಹೆಸರಿನಲ್ಲಿತ್ತು. 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ಸಿರಾಜ್ ಒಟ್ಟು 22 ಸಿಕ್ಸ್ಗಳನ್ನು ಹೊಡೆಸಿಕೊಂಡಿದ್ದರು. ಈ ಮೂಲಕ ಒಂದೇ ಸೀಸನ್ನಲ್ಲಿ ಅತ್ಯಧಿಕ ಸಿಕ್ ಚಚ್ಚಿಸಿಕೊಂಡ ಬೌಲರ್ ಎನಿಸಿಕೊಂಡಿದ್ದರು.

ಇದೀಗ ಈ ದಾಖಲೆ ರಶೀದ್ ಖಾನ್ ಪಾಲಾಗಿದೆ. ಈ ಬಾರಿಯ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದ ರಶೀದ್ ಖಾನ್ 15 ಪಂದ್ಯಗಳಿಂದ ಒಟ್ಟು 33 ಸಿಕ್ಸರ್ಗಳನ್ನು ಹೊಡೆಸಿಕೊಂಡಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದ ಸೀಸನ್ವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಬಿಟ್ಟುಕೊಟ್ಟ ಬೌಲರ್ ಎಂಬ ಹೀನಾಯ ದಾಖಲೆಗೆ ಕೊರೊಳೊಡ್ಡಿದ್ದಾರೆ.

ಇನ್ನು ಈ ಬಾರಿಯ ಐಪಿಎಲ್ನಲ್ಲಿ ರಶೀದ್ ಖಾನ್ ಅವರ ಪ್ರದರ್ಶನ ಕೂಡ ಅಷ್ಟಕಷ್ಟೇ. 15 ಇನಿಂಗ್ಸ್ಗಳಲ್ಲಿ ಒಟ್ಟು 330 ಎಸೆತಗಳನ್ನು ಎಸೆದಿದ್ದ ರಶೀದ್ 514 ರನ್ಗಳನ್ನು ನೀಡಿದ್ದಾರೆ. ಈ ವೇಳೆ ಪಡೆದಿರುವುದು ಕೇವಲ 9 ವಿಕೆಟ್ಗಳು ಮಾತ್ರ. ಅಂದರೆ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಶೀದ್ ಖಾನ್ 10 ಕ್ಕಿಂತ ಕಡಿಮೆ ವಿಕೆಟ್ ಪಡೆದಿದ್ದಾರೆ. ಅದು ಕೂಡ ಪ್ರತಿ ಓವರ್ಗೆ 9.34 ರನ್ ನೀಡುವ ಮೂಲಕ ಎಂಬುದೇ ಅಚ್ಚರಿ.