
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಮುಂಬರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. LLC ಹರಾಜಿಗೂ ಮುನ್ನ ಡಿಕೆಯನ್ನು ಸದರ್ನ್ ಸೂಪರ್ಸ್ಟಾರ್ಸ್ ಫ್ರಾಂಚೈಸಿಯು ಆಯ್ಕೆ ಮಾಡಿಕೊಂಡಿದೆ.

ಅದರಂತೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ನ 2024 ರ ಆವೃತ್ತಿಯಲ್ಲಿ ದಿನೇಶ್ ಕಾರ್ತಿಕ್ ಸದರ್ನ್ ಸೂಪರ್ಸ್ಟಾರ್ಸ್ ತಂಡದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ನಿವೃತ್ತ ಆಟಗಾರರ ಲೀಗ್ನಲ್ಲೂ ಡಿಕೆ ಹೊಸ ಇನಿಂಗ್ಸ್ ಆರಂಭಿಸುವ ಇರಾದೆಯಲ್ಲಿದ್ದಾರೆ.

ಇದಕ್ಕೂ ಮುನ್ನ ಟೀಮ್ ಇಂಡಿಯಾದ ಮಾಜಿ ಆಟಗಾರ ಶಿಖರ್ ಧವನ್ ಲೆಜೆಂಡ್ಸ್ ಲೀಗ್ ಕ್ರಿಕೆಟ್ಗೆ ತಮ್ಮ ಹೆಸರು ನೀಡಿದ್ದರು. ಅದರಂತೆ ಈ ಬಾರಿಯ LLC ಹರಾಜಿನಲ್ಲಿ ಧವನ್ ಹೆಸರು ಕಾಣಿಸಿಕೊಳ್ಳಲಿದೆ. ಇದೀಗ ದಿನೇಶ್ ಕಾರ್ತಿಕ್ ಕೂಡ ಲೆಜೆಂಡ್ಸ್ ಲೀಗ್ ಕ್ರಿಕೆಟ್ನತ್ತ ಮುಖ ಮಾಡಿರುವುದು ವಿಶೇಷ.

ಹಾಗೆಯೇ ಮುಂಬರುವ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ದಿನೇಶ್ ಕಾರ್ತಿಕ್ ಕಣಕ್ಕಿಳಿಯಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ಮಾಲೀಕತ್ವದ ಪಾರ್ಲ್ ರಾಯಲ್ಸ್ ಫ್ರಾಂಚೈಸಿಯು ಡಿಕೆಯನ್ನು ಖರೀದಿಸಿದ್ದಾರೆ. ಈ ಮೂಲಕ ವಿದೇಶಿ ಲೀಗ್ನಲ್ಲೂ ಕಣಕ್ಕಿಳಿಯಲು ಆರ್ಸಿಬಿ ತಂಡದ ಮಾಜಿ ಆಟಗಾರ ಸಜ್ಜಾಗಿದ್ದಾರೆ.

ಈಗಾಗಲೇ ಐಪಿಎಲ್ಗೆ ನಿವೃತ್ತಿ ಘೋಷಿರುವ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಆರ್ಸಿಬಿ ತಂಡದ ಮೆಂಟರ್ ಹುದ್ದೆಯನ್ನು ಸಹ ಅಲಂಕರಿಸಲಿದ್ದಾರೆ. ಇತ್ತ ಐಪಿಎಲ್ಗೆ ಗುಡ್ ಬೈ ಹೇಳಿರುವ ದಿನೇಶ್ ಕಾರ್ತಿಕ್ ಇದೀಗ ವಿವಿಧ ಲೀಗ್ನತ್ತ ಮುಖ ಮಾಡಿರುವುದು ವಿಶೇಷ.

ಅಂದಹಾಗೆ 17 ವರ್ಷಗಳ ಐಪಿಎಲ್ ಕೆರಿಯರ್ನಲ್ಲಿ ದಿನೇಶ್ ಕಾರ್ತಿಕ್ ಒಟ್ಟು 6 ತಂಡಗಳ ಪರ ಕಣಕ್ಕಿಳಿದಿದ್ದಾರೆ. ಈ ವೇಳೆ 2013 ರಲ್ಲಿ ಮುಂಬೈ ಇಂಡಿಯನ್ಸ್ ಪರ ಅವರು ಟ್ರೋಫಿ ಗೆದ್ದಿದ್ದರು. ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಗುಜರಾತ್ ಲಯನ್ಸ್ (ಈಗಿಲ್ಲ), ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಪರ ಆಡಿದ್ದರು. ಇದೀಗ ಲೆಜೆಂಡ್ಸ್ ಲೀಗ್ನಲ್ಲಿ ಸದರ್ನ್ ಸೂಪರ್ ಸ್ಟಾರ್ಸ್ ಹಾಗೂ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಪಾರ್ಲ್ ರಾಯಲ್ಸ್ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.