
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಲೀಗ್ ಹಂತದಲ್ಲಿ ಇನ್ನು ಉಳಿದಿರುವುದು ಕೇವಲ 4 ಮ್ಯಾಚ್ಗಳು ಮಾತ್ರ. ಇದಾದ ಬಳಿಕ ಪ್ಲೇಆಫ್ ಪಂದ್ಯಗಳು ಶುರುವಾಗಲಿದೆ. ಅಂದರೆ ಇನ್ನು ಕೇವಲ 8 ಪಂದ್ಯಗಳು ಮಾತ್ರ ಉಳಿದಿವೆ. ಅದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರಮುಖ ಆಟಗಾರ ಐಪಿಎಲ್ ತೊರೆದಿದ್ದಾರೆ.

ಹೌದು, ಆರ್ಸಿಬಿ ತಂಡದ ಪ್ರಮುಖ ವೇಗಿ ಲುಂಗಿ ಎನ್ಗಿಡಿ ತವರಿಗೆ ಮರಳಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಅಭ್ಯಾಸಕ್ಕಾಗಿ ಎನ್ಗಿಡಿ ಸೌತ್ ಆಫ್ರಿಕಾ ತಂಡವನ್ನು ಕೂಡಿಕೊಳ್ಳಬೇಕಿದೆ. ಹೀಗಾಗಿ ಅವರು ಕೊನೆಯ ಪಂದ್ಯಗಳಿಗೂ ಮುನ್ನ ಆರ್ಸಿಬಿ ತಂಡಕ್ಕೆ ಗುಡ್ ಬೈ ಹೇಳಿದ್ದಾರೆ.

ತವರಿಗೆ ಹಿಂತಿರುಗುತ್ತಿರುವುದನ್ನು ಖಚಿತಪಡಿಸಿರುವ ಲುಂಗಿ ಎನ್ಗಿಡಿ, ಆರ್ಸಿಬಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಐಪಿಎಲ್ ಅಭಿಯಾನದಿಂದ ಹೊರ ನಡೆಯುತ್ತಿರುವುದು ನಿರಾಶಾದಾಯಕ. ಇದಾಗ್ಯೂ ಆರ್ಸಿಬಿ ಅಭಿಮಾನಿಗಳಿಂದ ಸಿಕ್ಕ ಬೆಂಬಲ ಮತ್ತು ಪ್ರೀತಿಯನ್ನು ಪದಗಳಲ್ಲಿ ವ್ಯಕ್ತಪಡಿಸಲಾಗುವುದಿಲ್ಲ. ಆರ್ಸಿಬಿ ಫ್ಯಾಮಿಲಿಗೆ ನನ್ನ ಧನ್ಯವಾದಗಳು ಎಂದು ಲುಂಗಿ ಎನ್ಗಿಡಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಲುಂಗಿ ಎನ್ಗಿಡಿ ಬದಲಿಗೆ ಆರ್ಸಿಬಿ ತಂಡಕ್ಕೆ ಝಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿ ಎಂಟ್ರಿ ಕೊಟ್ಟಿದ್ದಾರೆ. ಝಿಂಬಾಬ್ವೆ ಪರ ಈವರೆಗೆ 70 ಟಿ20 ಪಂದ್ಯಗಳನ್ನಾಡಿರುವ ಮುಝರಬಾನಿ ಒಟ್ಟು 78 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅದು ಕೂಡ ಕೇವಲ 7.03 ರನ್ ಎಕಾನಮಿ ರೇಟ್ನಲ್ಲಿ ಎಂಬುದು ವಿಶೇಷ. ಹೀಗಾಗಿಯೇ ಆರ್ಸಿಬಿ ಬ್ಲೆಸಿಂಗ್ ಮುಝರಬಾನಿ ಅವರನ್ನು ಲುಂಗಿ ಎನ್ಗಿಡಿ ಬದಲಿಯಾಗಿ ಆಯ್ಕೆ ಮಾಡಿಕೊಂಡಿದೆ.

ಮತ್ತೊಂದೆಡೆ ಕಳೆದ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದ ಜೋಶ್ ಹೇಝಲ್ವುಡ್ ತಂಡಕ್ಕೆ ಹಿಂತಿರುಗಿದ್ದಾರೆ. ಭುಜದ ನೋವಿನ ಕಾರಣ ಬ್ರಿಸ್ಬೇನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೇಝಲ್ವುಡ್, ಸಿಎಸ್ಕೆ ಹಾಗೂ ಎಲ್ಎಸ್ಜಿ ವಿರುದ್ಧದ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಸಂಪೂರ್ಣ ಫಿಟ್ನೆಸ್ನೊಂದಿಗೆ ಜೋಶ್ ಹೇಝಲ್ವುಡ್ ಆರ್ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಎನ್ಗಿಡಿ ಬದಲಿಗೆ ಹೇಝಲ್ವುಡ್ ಕಣಕ್ಕಿಳಿಯಲಿದ್ದಾರೆ.