
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೆ ವೇದಿಕೆ ಸಿದ್ಧವಾಗಿದೆ. ಇಂದು (ಡಿ.16) ನಡೆಯಲಿರುವ ಮಿನಿ ಆಕ್ಷನ್ನಲ್ಲಿ ಕೆಲ ಆಟಗಾರರು ಕೋಟಿ ಮೊತ್ತಕ್ಕೆ ಬಿಕರಿಯಾಗುವುದು ಖಚಿತ. ಆದರೆ ಬೃಹತ್ ಮೊತ್ತ ಪಡೆಯುವ ಆಟಗಾರರಿಗೆ ಅಂತಿಮವಾಗಿ ಸಿಗುವುದು 18 ಕೋಟಿ ರೂ. ಮಾತ್ರ.

ಐಪಿಎಲ್ ಹರಾಜಿನ ಹೊಸ ನಿಯಮದ ಪ್ರಕಾರ, ವಿದೇಶಿ ಆಟಗಾರರಿಗೆ 18 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತ ಪಾವತಿಸುವಂತಿಲ್ಲ. ಇದಾಗ್ಯೂ ಎಷ್ಟು ಕೋಟಿಗೂ ಬೇಕಿದ್ದರೂ ಬಿಡ್ಡಿಂಗ್ ನಡೆಸಬಹುದು. ಅಂದರೆ ಪೈಪೋಟಿ ನಡುವೆ 18 ಕೋಟಿ ರೂ. ಅನ್ನು ಮೀರಿ ಬಿಡ್ಡಿಂಗ್ ನಡೆಸಲು ಅವಕಾಶ ನೀಡಲಾಗಿದೆ.

ಉದಾಹರಣೆಗೆ- 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿರುವ ಕ್ಯಾಮರೋನ್ ಗ್ರೀನ್ ಖರೀದಿಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. ಈ ಪೈಪೋಟಿ ನಡುವೆ ಬಿಡ್ಡಿಂಗ್ 18 ಕೋಟಿ ರೂ. ದಾಟಿ 25 ಕೋಟಿ ರೂ. ತಲುಪಿ ಅಂತಿಮವಾಗಿ ಕ್ಯಾಮರೋನ್ ಕೆಕೆಆರ್ ಪಾಲಾಯಿತು ಎಂದಿಕೊಟ್ಟುಕೊಳ್ಳಿ. ಇತ್ತ 25 ಕೋಟಿ ರೂ.ಗೆ ಹರಾಜಾದರೂ ಗ್ರೀನ್ಗೆ ಸಿಗುವುದು 18 ಕೋಟಿ ರೂ. ಮಾತ್ರ.

ಇಲ್ಲಿ ಕೆಕೆಆರ್ 25 ಕೋಟಿಯಲ್ಲಿ 18 ಕೋಟಿ ರೂ. ಅನ್ನು ಗ್ರೀನ್ಗೆ ಪಾವತಿಸಿದರೆ ಉಳಿದ 7 ಕೋಟಿಯನ್ನು ಬಿಸಿಸಿಐಗೆ ನೀಡಬೇಕಾಗುತ್ತದೆ. ಅಂದರೆ ವಿದೇಶಿ ಆಟಗಾರನಿಗೆ 18 ಕೋಟಿ ರೂ. ನಿಗದಿ ಮಾಡಲಾಗಿದೆ. ಅದರಂತೆ ಒಬ್ಬ ವಿದೇಶಿ ಆಟಗಾರನು 18 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತ ಪಡೆದರೆ ಫ್ರಾಂಚೈಸಿ ನಿಗದಿತ 18 ಕೋಟಿ ರೂ. ಅನ್ನು ಮಾತ್ರ ಆಟಗಾರನಿಗೆ ನೀಡಬೇಕು. ಇನ್ನುಳಿದ ಹೆಚ್ಚುವರಿ ಮೊತ್ತವನ್ನು ಫ್ರಾಂಚೈಸಿಯು ಬಿಸಿಸಿಐಯು ಕಲ್ಯಾಣ ನಿಧಿಗೆ ಪಾವತಿಸಬೇಕಾಗುತ್ತದೆ.

ಇಂತಹದೊಂದು ವಿಶೇಷ ನಿಯಮವನ್ನು ಜಾರಿಗೊಳಿಸಲು ಮುಖ್ಯ ಕಾರಣ ರಿಟೈನ್ ಆಗುವ ಸ್ಟಾರ್ ಆಟಗಾರರಿಗೆ ಕಡಿಮೆ ಮೊತ್ತ ಲಭಿಸುತ್ತಿರುವುದು. ಕಳೆದ ಸೀಸನ್ನಲ್ಲಿ ರಿಟೈನ್ ಆಗುವ ಮೊದಲ ಆಟಗಾರನಿಗೆ 18 ಕೋಟಿ ರೂ. ನಿಗದಿ ಮಾಡಲಾಗಿತ್ತು. ಹೀಗಾಗಿ ಈ ಬಾರಿ ವಿದೇಶಿ ಆಟಗಾರರನ ಗರಿಷ್ಠ ಮೊತ್ತವನ್ನು 18 ಕೋಟಿ ರೂ. ನಿಗದಿ ಮಾಡಲಾಗಿದೆ.

ಭಾರತದ ಕೆಲ ಸ್ಟಾರ್ ಆಟಗಾರರು 15, 17 ಕೋಟಿ ರೂ.ಗೆ ರಿಟೈನ್ ಆದ ಉದಾಹರಣೆಗಳಿವೆ. ಇದೇ ವೇಳೆ ಹರಾಜಿನ ಮೂಲಕ ಮಿಚೆಲ್ ಸ್ಟಾರ್ಕ್ನಂತಹ ಆಟಗಾರರು 24 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತ ಪಡೆದಿದ್ದಾರೆ. ಈ ಅಸಮಾನತೆಯನ್ನು ತಪ್ಪಿಸುವ ಸಲುವಾಗಿ ಬಿಸಿಸಿಐ ವಿದೇಶಿ ಆಟಗಾರರ ಗರಿಷ್ಠ ಮೊತ್ತ 18 ಕೋಟಿ ರೂ. ಎಂದು ನಿಗದಿ ಮಾಡಿದೆ. ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಬಿಡ್ ಮಾಡಿದರೆ, ಆ ಮೊತ್ತವನ್ನು (18 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತ) ಫ್ರಾಂಚೈಸಿ ಬಿಸಿಸಿಐಗೆ ಪಾವತಿಸಬೇಕು. ಅಲ್ಲದೆ ಈ ಹೆಚ್ಚುವರಿ ಮೊತ್ತವನ್ನು ಬಿಸಿಸಿಐ ಆಟಗಾರರ ಕಲ್ಯಾಣಕ್ಕಾಗಿ ಬಳಸಿಕೊಳ್ಳಲಿದೆ.
Published On - 8:25 am, Tue, 16 December 25