
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 26 ರಿಂದ ರಂಗು ರಂಗಿನ ಕ್ರಿಕೆಟ್ ಟೂರ್ನಿ ಶುರುವಾಗಲಿದ್ದು, ಮೇ ತಿಂಗಳ ಕೊನೆಯ ದಿನಾಂಕದಂದು ಫೈನಲ್ ಪಂದ್ಯ ಆಯೋಜಿಸಲು ನಿರ್ಧರಿಸಲಾಗಿದೆ.

ಅದರಂತೆ ಈ ಬಾರಿ ಗುರುವಾರದಿಂದ (ಮಾರ್ಚ್ 26) ಐಪಿಎಲ್ ಶುರುವಾಗಲಿದ್ದು, ಮೇ 31 ರಂದು ಭಾನುವಾರ ಫೈನಲ್ ಪಂದ್ಯ ಜರುಗಲಿದೆ. ಈ ಮೂಲಕ 67 ದಿನಗಳ ಕಾಲ ಪಂದ್ಯಾವಳಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ ಭಾರತದಲ್ಲಿ ಟಿ೨೦ ವಿಶ್ವಕಪ್ ಕೂಡ ಜರುಗಲಿದೆ. ಭಾರತ-ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ೨೦ ವಿಶ್ವಕಪ್ ಫೆಬ್ರವರಿ 7 ರಿಂದ ಆರಂಭವಾಗಲಿದೆ. ಇನ್ನು ಫೈನಲ್ ಪಂದ್ಯ ಮಾರ್ಚ್ 8 ರಂದು ನಡೆಯಲಿದೆ. ಅಂದರೆ ಟಿ೨೦ ವಿಶ್ವಕಪ್ ಮುಗಿದು 17 ದಿನಗಳ ಬಳಿಕ ಐಪಿಎಲ್ ಆರಂಭವಾಗಲಿದೆ.

ಇನ್ನು ಟಿ೨೦ ವಿಶ್ವಕಪ್ ಆರಂಭಕ್ಕೂ ಮುನ್ನವೇ ವುಮೆನ್ಸ್ ಪ್ರೀಮಿಯರ್ ಲೀಗ್ ಆಯೋಜಿಸಲು ನಿರ್ಧರಿಸಲಾಗಿದೆ. ವುಮೆನ್ಸ್ ಪ್ರೀಮಿಯರ್ ಲೀಗ್ ಜನವರಿ 9 ರಿಂದ ಆರಂಭವಾಗಲಿದೆ. ಐದು ತಂಡಗಳ ನಡುವಿನ ಈ ಟೂರ್ನಿಯ ಫೈನಲ್ ಪಂದ್ಯವು ಫೆಬ್ರವರಿ 5 ರಂದು ಜರುಗಲಿದೆ.

ಅಂದರೆ ಜನವರಿ ತಿಂಗಳಿಂದ ಭಾರತದಲ್ಲಿ ಕ್ರಿಕೆಟ್ ಹಬ್ಬ ಶುರುವಾಗಲಿದೆ. ಮೊದಲಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ ನಡೆದರೆ, ಅದರ ಬೆನ್ನಲ್ಲೇ ಟಿ೨೦ ವಿಶ್ವಕಪ್ ಆರಂಭವಾಗಲಿದೆ. ಟಿ೨೦ ವಿಶ್ವಕಪ್ ಮುಕ್ತಾಯದ ವಾರಗಳ ಬಳಿಕ ಐಪಿಎಲ್ ಶುರುವಾಗಲಿದೆ. ಅಂದರೆ 5 ತಿಂಗಳುಗಳ ಕಾಲ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆಯ ರಸದೌತಣ ಸಿಗುವುದು ಖಚಿತ.
Published On - 7:23 am, Tue, 16 December 25