ಎಲ್ಲಾ 10 ತಂಡಗಳು ಐಪಿಎಲ್ 2023 ರತ್ತ ಮೊದಲ ಹೆಜ್ಜೆ ಇಟ್ಟಿವೆ. ಮಿನಿ ಹರಾಜಿಗೆ ಪ್ರವೇಶಿಸುವ ಮೊದಲು ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು, ಬೇಡವಾದ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿವೆ. ಈ ಬಿಡುಗಡೆಯಾದ ಆಟಗಾರರ ಪಟ್ಟಿಯಲ್ಲಿ ಹಲವು ದಿಗ್ಗಜ ಆಟಗಾರರ ಹೆಸರು ಇರುವುದು ಈಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಅಂತಹ ಕೆಲವು ಆಟಗಾರರ ಪಟ್ಟಿ ಇಲ್ಲಿದೆ.
ಕೀರನ್ ಪೊಲಾರ್ಡ್- ಐಪಿಎಲ್ 2023 ಕ್ಕೆ ಸಂಬಂಧಿಸಿದಂತೆ ಮುಂಬೈ ಇಂಡಿಯನ್ಸ್ ತಮ್ಮ ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡುವ ಮೊದಲೇ ಕೀರನ್ ಪೊಲಾರ್ಡ್ ಐಪಿಎಲ್ಗೆ ನಿವೃತ್ತಿ ಘೋಷಿಸಿದ್ದಾರೆ. ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ, ಮುಂಬೈ 6 ಕೋಟಿ ರೂ.ಗೆ ಪೊಲಾರ್ಡ್ ಅವರನ್ನು ಖರೀದಿಸಿತ್ತು. ಆದಾಗ್ಯೂ, ಪೊಲಾರ್ಡ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ಮುಂಬೈ ಆಯ್ಕೆ ಮಾಡಿಕೊಂಡಿದೆ.
ಡ್ವೇನ್ ಬ್ರಾವೋ- ಡ್ವೇನ್ ಬ್ರಾವೋ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಧೋನಿಯ ಕಿರಿಯ ಸಹೋದರನಂತೆ. ಸಿಎಸ್ಕೆಯ ಈ ಮ್ಯಾಚ್ ವಿನ್ನರ್, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಒಬ್ಬರು. ಮೂಲ ಬೆಲೆ 2 ಕೋಟಿ ರೂಪಾಯಿಗೆ ಹರಾಜಿಗೆ ಎಂಟ್ರಿಕೊಟ್ಟಿದ್ದ ಬ್ರಾವೋ, 4.40 ಕೋಟಿ ರೂಪಾಯಿಗೆ ಚೆನ್ನೈ ಪಾಲಾಗಿದ್ದರು. ಆದಾಗ್ಯೂ, ಈಗ ಐಪಿಎಲ್ 2023 ರಲ್ಲಿ, ಬ್ರಾವೋ ಹಳದಿ ಜೆರ್ಸಿಯಲ್ಲಿ ಕಾಣಿಸುವುದಿಲ್ಲ. ಹರಾಜಿಗೂ ಮುನ್ನ ಬ್ರಾವೋ ಅವರನ್ನು ಸಿಎಸ್‌ಕೆ ಫ್ರಾಂಚೈಸಿ ಬಿಡುಗಡೆ ಮಾಡಿದೆ. ಇದರೊಂದಿಗೆ, ಬ್ರಾವೋ ಐಪಿಎಲ್‌ನಲ್ಲಿ ಮುಂದೆ ಆಡುವುದಕ್ಕೂ ಗ್ರಹಣ ಹಿಡಿದಿದೆ.
ರಾಬಿನ್ ಉತ್ತಪ್ಪ- ಸಿಎಸ್‌ಕೆ ಐಪಿಎಲ್ 2022 ರ ಹರಾಜಿನಲ್ಲಿ ರಾಬಿನ್ ಉತ್ತಪ್ಪ ಅವರ ಮೂಲ ಬೆಲೆ 2 ಕೋಟಿಗೆ ಖರೀದಿಸಿತು. ಆದರೆ ಐಪಿಎಲ್ 2023 ರ ಮೊದಲು, ಚೆನ್ನೈ ತಂಡವು ಅವರನ್ನು ಬಿಡುಗಡೆ ಮಾಡಿದೆ. ಈಗ ರಾಬಿನ್ ಉತ್ತಪ್ಪ ಮೇಲೆ ಬೇರೆ ಯಾವುದೇ ತಂಡ ಬಾಜಿ ಕಟ್ಟುತ್ತದೆ ಎಂಬ ನಿರೀಕ್ಷೆ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಐಪಿಎಲ್ 2023ಕ್ಕೂ ಮುನ್ನ ಉತ್ತಪ್ಪ ಅವರ ಐಪಿಎಲ್ ವೃತ್ತಿಜೀವನಕ್ಕೂ ಗ್ರಹಣ ಬೀಳುತ್ತಿದೆ.
ಮನೀಶ್ ಪಾಂಡೆ - 1 ಕೋಟಿ ರೂ ಮೂಲ ಬೆಲೆಯೊಂದಿಗೆ ಹರಾಜಿಗೆ ಎಂಟ್ರಿಕೊಟ್ಟಿದ್ದ ಮನೀಶ್ ಪಾಂಡೆಯನ್ನು ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ರೂ 4.60 ಕೋಟಿಗೆ ಖರೀದಿಸಿತು. ಆದರೆ, ಐಪಿಎಲ್ 2023 ರ ಮೊದಲು, ಲಕ್ನೋ ಫ್ರಾಂಚೈಸ್ ಕೂಡ ಅವರನ್ನು ಬಿಡುಗಡೆ ಮಾಡಿದೆ. ಈಗ ಮುಂದಿನ ಮಿನಿ ಹರಾಜಿನಲ್ಲಿ ಅವರನ್ನು ಖರೀದಿಸುವ ಸಾಧ್ಯತೆ ತೀರ ಕಡಿಮೆ ಇದೆ.
ಅಜಿಂಕ್ಯ ರಹಾನೆ - ಮೂಲ ಬೆಲೆ 1 ಕೋಟಿ ಕೊಟ್ಟು ರಹಾನೆ ಅವರನ್ನು ಕೆಕೆಆರ್ ಖರೀದಿಸಿತು. ಆದರೆ ಐಪಿಎಲ್ 2022 ರಲ್ಲಿ ರಹಾನೆ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಈಗ ಕೆಕೆಆರ್ ಅವರನ್ನು ಐಪಿಎಲ್ 2023 ರ ಮಿನಿ ಹರಾಜಿಗೂ ಮೊದಲು ಬಿಡುಗಡೆ ಮಾಡಿದೆ. ಕೋಲ್ಕತ್ತಾದ ಈ ನಿರ್ಧಾರದ ನಂತರ ರಹಾನೆ ಅವರ ಐಪಿಎಲ್ ವೃತ್ತಿಜೀವನವು ಕತ್ತಲಮಯವಾಗಿದೆ.