
ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡಕ್ಕೆ ಒಂದು ಕೆಟ್ಟ ಸುದ್ದಿ ಎದುರಾಗಿದೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಸ್ನಾಯು ಸೆಳೆತದ ಕಾರಣದಿಂದ ಎರಡನೇ ಟಿ20 ಮಾತ್ರವಲ್ಲದೆ, ಮೂರನೇ ಟಿ20 ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ(PC-PTI).
ಗುರುವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಸ್ನಾಯು ಸೆಳೆತದಿಂದ ಬಳಲಿದರು. ಹೀಗಾಗಿ ಆ ಪಂದ್ಯದಲ್ಲಿ ಅವರು ನಾಲ್ಕನೇ ಕ್ರಮಾಂಕದ ಬದಲು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ತಿಲಕ್ ವರ್ಮಾ ಮೂರನೇ ಕ್ರಮಾಂಕದಲ್ಲಿ ಆಡಿದ್ದರು. ಆದರೆ, ಇಶಾನ್ ಕೇವಲ 3 ಎಸೆತಗಳನ್ನು ಎದುರಿಸಿ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು(PC-PTI).
ಎರಡನೇ ಟಿ20 ಪಂದ್ಯಕ್ಕೂ ಮುನ್ನ ಕಿಶನ್ ಗಾಯದ ಬಗ್ಗೆ ಮಾಹಿತಿ ನೀಡಿದ್ದ ಬಿಸಿಸಿಐ, ‘ಇಶಾನ್ ಕಿಶನ್ ಅವರ ಬಲಗಾಲಿನಲ್ಲಿ ಸೆಳೆತ ಉಂಟಾಗಿದೆ. ಸದ್ಯ ಅವರು ಬಿಸಿಸಿಐ ವೈದ್ಯಕೀಯ ತಂಡದ ನಿಗಾದಲ್ಲಿದ್ದಾರೆ. ಹೀಗಾಗಿ, ಎರಡನೇ ಪಂದ್ಯದಲ್ಲಿ ಕಿಶನ್ ಕಣಕ್ಕಿಳಿಯುವುದಿಲ್ಲ’ ಎಂಬ ಮಾಹಿತಿ ನೀಡಿತ್ತು. ಹೀಗಾಗಿ ಕಿಶನ್ 2ನೇ ಟಿ20 ಪಂದ್ಯವನ್ನು ಆಡದಿರುವುದು ಖಚಿತವಾಗಿತ್ತು(PC-PTI).
ಆದಾಗ್ಯೂ ಮೂರನೇ ಟಿ20 ಪಂದ್ಯದ ವೇಳೆಗೆ ಕಿಶನ್ ಚೇತರಿಸಿಕೊಳ್ಳುವ ನಿರೀಕ್ಷೆಯನ್ನು ಅಭಿಮಾನಿಗಳು ಹೊಂದಿದ್ದರು. ಆದರೀಗ ವರದಿಯಾಗಿರುವಂತೆ ಕಿಶನ್ ಚೇತರಿಕೆಗೆ ಇನ್ನು ಕಾಲಾವಕಾಶ ಬೇಕಾಗಿರುವುದರಿಂದ ಅವರನ್ನು ಮೂರನೇ ಟಿ20 ಪಂದ್ಯದಿಂದಲೂ ಹೊರಗಿಡಲಾಗುತ್ತಿದೆ. ಆದರೆ ಈ ಬಗ್ಗೆ ಬಿಸಿಸಿಐ ಯಾವುದೇ ಪ್ರಕಟಣೆ ಹೊರಡಿಸದಿದ್ದರೂ 2ನೇ ಪಂದ್ಯದ ಬಳಿಕ ಮಾಹಿತಿ ನೀಡುವ ಸಾಧ್ಯತೆಗಳಿವೆ(PC-PTI).
ಇನ್ನು ಎರಡನೇ ಟಿ20 ಪಂದ್ಯದಿಂದ ಹೊರಬಿದ್ದಿರುವ ಇಶಾನ್ ಕಿಶನ್ ಬದಲು ತಂಡದ ಆಡುವ ಹನ್ನೊಂದರ ಬಳಗದಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಗಿದೆ. ಅಲ್ಲದೆ ಇಶಾನ್ ಕಿಶನ್ ಬದಲಿಗೆ ತಂಡಕ್ಕೆ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕುಮಾರ್ ಕುಶಾಗ್ರ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ(PC-PTI).