
ಟೀಮ್ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿ ಇಂಗ್ಲೆಂಡ್ ಬ್ಯಾಟರ್ ಜೇಕಬ್ ಬೆಥೆಲ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡಿತು.

ಅದರಂತೆ ಇಂಗ್ಲೆಂಡ್ ಪರ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೇಕಬ್ ಬೆಥೆಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಟೀಮ್ ಇಂಡಿಯಾ ಬೌಲರ್ಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ಬೆಥೆಲ್ 64 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 51 ರನ್ ಬಾರಿಸಿದರು.

ಈ ಅರ್ಧಶತಕದೊಂದಿಗೆ ಭಾರತದಲ್ಲಿ ಏಕದಿಕ ಕ್ರಿಕೆಟ್ನಲ್ಲಿ ಹಾಫ್ ಸೆಂಚುರಿ ಸಿಡಿಸಿದ ಇಂಗ್ಲೆಂಡ್ನ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಜೇಕಬ್ ಬೆಥೆಲ್ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ ದಾಂಡಿಗ ಜೋ ರೂಟ್ ಹೆಸರಿನಲ್ಲಿತ್ತು.

2013 ರಲ್ಲಿ ಮೊಹಾಲಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಜೋ ರೂಟ್ ಅರ್ಧಶತಕ ಬಾರಿಸಿದ್ದರು. ಈ ವೇಳೆ ಅವರ ವಯಸ್ಸು 22 ವರ್ಷ, 24 ದಿನಗಳು. ಈ ಮೂಲಕ ಭಾರತದಲ್ಲಿ ಅರ್ಧಶತಕ ಸಿಡಿಸಿದ ಇಂಗ್ಲೆಂಡ್ನ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಜೇಕಬ್ ಬೆಥೆಲ್ ಯಶಸ್ವಿಯಾಗಿದ್ದಾರೆ. ನಾಗ್ಪುರದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸುವುದರೊಂದಿಗೆ 21 ವರ್ಷದ ಬೆಥೆಲ್ ಭಾರತೀಯ ಪಿಚ್ನಲ್ಲಿ ಹಾಫ್ ಸೆಂಚುರಿ ಸಿಡಿಸಿದ ಇಂಗ್ಲೆಂಡ್ನ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದೀಗ ಅರ್ಧಶತಕದೊಂದಿಗೆ ಭಾರತೀಯ ಪಿಚ್ನಲ್ಲಿ ಹಾಫ್ ಸೆಂಚುರಿ ಖಾತೆ ತೆರೆದಿರುವ ಜೇಕಬ್ ಬೆಥೆಲ್ ಮುಂಬರುವ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಯಲಿದ್ದಾರೆ. ಆರ್ಸಿಬಿ ಫ್ರಾಂಚೈಸಿಯು ಈ ಬಾರಿಯ ಐಪಿಎಲ್ಗಾಗಿ ಬೆಥೆಲ್ ಅವರನ್ನು ಬರೋಬ್ಬರಿ 2.6 ಕೋಟಿ ರೂ.ಗೆ ಖರೀದಿಸಿದ್ದು, ಈ ಮೂಲಕ ಯುವ ಆಲ್ರೌಂಡರ್ನನ್ನು ಕಣಕ್ಕಿಳಿಸಲು ಪ್ಲ್ಯಾನ್ ರೂಪಿಸಿದೆ.