
ಇಂಗ್ಲೆಂಡ್ನ ಸರ್ವಶ್ರೇಷ್ಠ ವೇಗಿ ಜೇಮ್ಸ್ ಅ್ಯಂಡರ್ಸನ್ (James Anderson) ದಿ ಹಂಡ್ರೆಡ್ ಲೀಗ್ಗೆ ಪಾದಾರ್ಪಣೆ ಮಾಡಿದ್ದಾರೆ. ಅದು ಸಹ 43ನೇ ವಯಸ್ಸಿನಲ್ಲಿ. ಈ ಮೂಲಕ ಫ್ರಾಂಚೈಸಿ ಲೀಗ್ನಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಜೇಮ್ಸ್ ಅ್ಯಂಡರ್ಸನ್ ತಮ್ಮದಾಗಿಸಿಕೊಂಡಿದ್ದಾರೆ.

ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆದ ಸದರ್ನ್ ಬ್ರೇವ್ ವಿರುದ್ಧದ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಒರಿಜಿನಲ್ಸ್ ಪರ ಕಣಕ್ಕಿಳಿಯುವ ಮೂಲಕ ಜೇಮ್ಸ್ ಅ್ಯಂಡರ್ಸನ್ ಈ ಸಾಧನೆ ಮಾಡಿದ್ದಾರೆ. ಈ ಸಾಧನೆಯೊಂದಿಗೆ ದಿ ಹಂಡ್ರೆಡ್ ಲೀಗ್ನಲ್ಲಿ ಕಾಣಿಸಿಕೊಂಡ 2ನೇ ಹಿರಿಯ ಆಟಗಾರ ಎಂಬ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ.

ದಿ ಹಂಡ್ರೆಡ್ ಲೀಗ್ನಲ್ಲಿ ಕಣಕ್ಕಿಳಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ಇಮ್ರಾನ್ ತಾಹಿರ್ ಹೆಸರಿನಲ್ಲಿದೆ. 2023 ರಲ್ಲಿ ಬರ್ಮಿಂಗ್ಹ್ಯಾಮ್ ಫಿನಿಕ್ಸ್ ಪರ ಕಣಕ್ಕಿಳಿಯುವ ಮೂಲಕ ಸೌತ್ ಆಫ್ರಿಕಾ ಸ್ಪಿನ್ನರ್ ಈ ದಾಖಲೆ ಬರೆದಿದ್ದಾರೆ. ಈ ವೇಳೆ ಇಮ್ರಾನ್ ತಾಹಿರ್ ಅವರ ವಯಸ್ಸು 43 ವರ್ಷ, 149 ದಿನಗಳಾಗಿತ್ತು.

ಇದೀಗ 43 ವರ್ಷ, 7 ದಿನಗಳ ವಯಸ್ಸಿನಲ್ಲಿ ದಿ ಹಂಡ್ರೆಡ್ ಲೀಗ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಜೇಮ್ಸ್ ಅ್ಯಂಡರ್ಸನ್ 100 ಎಸೆತಗಳ ಟೂರ್ನಿ ಆಡಿದ 2ನೇ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೆ ಫ್ರಾಂಚೈಸಿ ಲೀಗ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ವಿಶ್ವದ ಅತ್ಯಂತ ಹಿರಿಯ ಕ್ರಿಕೆಟಿಗ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅಂದರೆ ಇದಕ್ಕೂ ಮುನ್ನ ಅ್ಯಂಡರ್ಸನ್ ಯಾವುದೇ ಫ್ರಾಂಚೈಸಿ ಲೀಗ್ ಆಡಿರಲಿಲ್ಲ.

ಇನ್ನು ಚೊಚ್ಚಲ ದಿ ಹಂಡ್ರೆಡ್ ಲೀಗ್ ಪಂದ್ಯವಾಡಿದ ಜೇಮ್ಸ್ ಅ್ಯಂಡರ್ಸನ್ ಒಟ್ಟು 20 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 36 ರನ್ ನೀಡಿದರೂ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ. ಇನ್ನು ಈ 20 ಎಸೆತಗಳಲ್ಲಿ 5 ಡಾಟ್ ಬಾಲ್ ಎಸೆಯುವಲ್ಲಿ ಸಫಲರಾಗಿದ್ದರು. ಹೀಗಾಗಿ ಅನುಭವಿ ವೇಗಿಯನ್ನು ಮುಂದಿನ ಪಂದ್ಯದಲ್ಲೂ ಕಣಕ್ಕಿಳಿಸುವ ಸಾಧ್ಯತೆಯಿದೆ.
Published On - 10:11 am, Thu, 7 August 25