
ಐಪಿಎಲ್ 2026 ರ ಸಂಭ್ರಮದ ನಡುವೆ , ಐಸಿಸಿ ಮಾರ್ಚ್ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಭಾರತದ ಜಸ್ಪ್ರೀತ್ ಬುಮ್ರಾ ಮತ್ತು ಸಂಜು ಸ್ಯಾಮ್ಸನ್ ಸ್ಥಾನ ಪಡೆದಿದ್ದು, ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕಾನರ್ ಈಸ್ಟರ್‌ಹ್ಯೂಗೆನ್ ಕೂಡ ಈ ಪ್ರಶಸ್ತಿಗೆ ಮೂರನೇ ನಾಮನಿರ್ದೇಶಿತರಾಗಿದ್ದಾರೆ.

ಬುಮ್ರಾ ಮತ್ತು ಸ್ಯಾಮ್ಸನ್, 2026 ರ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರ ಪ್ರದರ್ಶನದ ಆಧಾರದ ಮೇಲೆ ಮಾರ್ಚ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿನ ಪ್ರದರ್ಶನದಿಂದಾಗಿ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಅವರನ್ನು ನಾಮನಿರ್ದೇಶಿತರ ಪಟ್ಟಿಯಲ್ಲಿ ಸೇರಿಸಲಾಗಿದೆ.

2025 ರ ಟಿ20 ವಿಶ್ವಕಪ್‌ನಲ್ಲಿ ನೀಡಿದ ಅಮೋಘ ಪ್ರದರ್ಶನಕ್ಕೆ ಸಂಜು ಸ್ಯಾಮ್ಸನ್ ಟೂರ್ನಮೆಂಟ್ ಆಟಗಾರ ಪ್ರಶಸ್ತಿಯೂ ಲಭಿಸಿತ್ತು . ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಸೂಪರ್ 8 ಪಂದ್ಯದಲ್ಲಿ ಅವರು ಅಜೇಯ 97ರನ್, ನಂತರ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ 89 ರನ್ ಆ ನಂತರ ನಡೆದ ಫೈನಲ್‌ನಲ್ಲಿಯೂ ಸಹ ಉತ್ತಮ ಪ್ರದರ್ಶನ ನೀಡಿದರು.

ಸಂಜು ಸ್ಯಾಮ್ಸನ್ ಈ ನಿರ್ಣಾಯಕ ಮೂರು ಪಂದ್ಯಗಳಲ್ಲಿ 199.27 ಸ್ಟ್ರೈಕ್ ರೇಟ್‌ನಲ್ಲಿ 275 ರನ್ ಕಲೆಹಾಕಿದ್ದರು. ಅಲ್ಲದೆ ಸತತ ಮೂರು ಪಂದ್ಯಗಳಲ್ಲೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಇದರ ಜೊತೆಗೆ ಐಸಿಸಿ ಟಿ20ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ 20 ರಲ್ಲಿ ಸ್ಥಾನ ಪಡೆದರು.

2026 ರ ಟಿ20ವಿಶ್ವಕಪ್‌ನಲ್ಲಿ ಜಸ್ಪ್ರೀತ್ ಬುಮ್ರಾ ಆಡಿದ 8 ಪಂದ್ಯಗಳಲ್ಲಿ 12.42 ರ ಸರಾಸರಿಯಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದರು. 15 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿದ್ದರೆ, ಅವರ ಎಕಾನಮಿ 6.21 ಆಗಿತ್ತು. ನ್ಯೂಜಿಲೆಂಡ್ ವಿರುದ್ಧ 4 ಓವರ್‌ಗಳಲ್ಲಿ 15 ರನ್‌ಗಳನ್ನು ಬಿಟ್ಟುಕೊಟ್ಟಿದ್ದ ಬುಮ್ರಾಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತ್ತು.

ಇನ್ನು ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕಾನರ್ ಈಸ್ಟರ್‌ಹ್ಯೂಗೆನ್ ಇದುವರೆಗೆ ಕೇವಲ ಒಂದು ಟಿ20 ಸರಣಿಯನ್ನು ಮಾತ್ರ ಆಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಆ ಸರಣಿಯಲ್ಲಿ, ಅವರು ಅಡಿದ ಐದು ಪಂದ್ಯಗಳಲ್ಲಿ 145.98 ಸ್ಟ್ರೈಕ್ ರೇಟ್‌ನಲ್ಲಿ ಎರಡು ಅರ್ಧಶತಕಗಳು ಸೇರಿದಂತೆ 200 ರನ್ ಗಳಿಸಿದ್ದಾರೆ.