
ದೆಹಲಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಇಡೀ ವೆಸ್ಟ್ ಇಂಡೀಸ್ ತಂಡ ಸಂಪೂರ್ಣವಾಗಿ ವಿಫಲವಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾದ 518 ರನ್‌ಗಳಿಗೆ ಉತ್ತರವಾಗಿ, ವಿಂಡೀಸ್ ಕೇವಲ 248 ರನ್‌ಗಳಿಗೆ ಆಲೌಟ್ ಆಯಿತು. ಇದರಿಂದ ಫಾಲೋ ಆನ್ ಪಡೆದ ವಿಂಡೀಸ್ ಪಡೆ 2ನೇ ಇನ್ನಿಂಗ್ಸ್‌ನಲ್ಲಿ ಕೊಂಚ ಪ್ರತಿರೋಧ ತೋರುತ್ತಿದೆ.

ಇದೀಗ ತಂಡದ ಕಳಪೆ ಪ್ರದರ್ಶನದ ನಡುವೆ ವೆಸ್ಟ್ ಇಂಡೀಸ್‌ನ ವೇಗದ ಬೌಲರ್ ಜೇಡನ್ ಸೀಲ್ಸ್‌ಗೆ ಐಸಿಸಿಯಿಂದ ಎರಡೆರಡು ಶಿಕ್ಷೆ ವಿಧಿಸಲಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ಪಡೆಯದಿದ್ದರೂ, ಮೈದಾನದಲ್ಲಿ ಅವರು ತೋರಿದ ದುರ್ವರ್ತನೆಗೆ ಐಸಿಸಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಭಾರತ ಬ್ಯಾಟಿಂಗ್ ಮಾಡುವ ವೇಳೆ ಜೇಡನ್ ಸೀಲ್ಸ್ ತೋರಿದ ಆಕ್ರಮಣಕಾರಿ ವರ್ತನೆ ನಿಯಮಗಳಿಗೆ ವಿರುದ್ಧವಾಗಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕಠಿಣ ದಂಡ ವಿಧಿಸಿದೆ. ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಸೀಲ್ಸ್‌ಗೆ ಪಂದ್ಯ ಶುಲ್ಕದ 25% ದಂಡ ವಿಧಿಸಿದ್ದು, ಡಿಮೆರಿಟ್ ಪಾಯಿಂಟ್ ಅನ್ನು ನೀಡಿದೆ.

ದೆಹಲಿ ಟೆಸ್ಟ್ ಪಂದ್ಯದ ಮೊದಲ ದಿನದಂದು ವೆಸ್ಟ್ ಇಂಡೀಸ್ ತಂಡದ ಪರ ಜೇಡನ್ ಸೀಲ್ಸ್ 29 ನೇ ಓವರ್ ಎಸೆದರು. ಜೇಡನ್ ಸೀಲ್ಸ್ ಅವರ ಎಸೆತವನ್ನು ಎದುರಿಸಲು ಯಶಸ್ವಿ ಜೈಸ್ವಾಲ್ ಕ್ರೀಸ್‌ನಲ್ಲಿದ್ದರು. ಸೀಲ್ಸ್ ತಮ್ಮ ಫಾಲೋ-ಥ್ರೂನಲ್ಲಿ ಚೆಂಡನ್ನು ತೆಗೆದುಕೊಂಡು ನೇರವಾಗಿ ಜೈಸ್ವಾಲ್‌ಗೆ ಹೊಡೆದರು. ಯಶಸ್ವಿಯನ್ನು ರನ್ ಔಟ್ ಮಾಡಲು ಉದ್ದೇಶಿಸಿರುವುದಾಗಿ ಸೀಲ್ಸ್ ಹೇಳಿಕೊಂಡರು, ಆದರೆ ಅಂಪೈರ್ ಮತ್ತು ಮ್ಯಾಚ್ ರೆಫರಿ ರನ್ ಔಟ್ ಸಮರ್ಥನೀಯವಲ್ಲ ಎಂದು ನಿರ್ಧರಿಸಿ ಪೆನಾಲ್ಟಿ ನೀಡಿದರು.

ಅಲ್ಲದೆ ಜೇಡನ್ ಸೀಲ್ಸ್ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.9 ಅನ್ನು ಸೀಲ್ಸ್ ಉಲ್ಲಂಘಿಸಿದ್ದು, ಅವರ ಅಶಿಸ್ತಿಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ. ಸೀಲ್ಸ್ ಈ ರೀತಿಯಾಗಿ ಡಿಮೆರಿಟ್ ಅಂಕ ಪಡೆಯುತ್ತಿರುವುದು ಇದೇ ಮೊದಲಲ್ಲ. ಡಿಸೆಂಬರ್ 2024 ರಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿಯೂ ಸೀಲ್ಸ್‌ಗೆ ಡಿಮೆರಿಟ್ ಪಾಯಿಂಟ್ ನೀಡಲಾಗಿತ್ತು.