
ಢಾಕಾದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ವೇಗಿ ಜಯದೇವ್ ಉನಾದ್ಕಟ್ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ. ಅದು ಕೂಡ ಇದುವರೆಗೆ ಯಾವುದೇ ಭಾರತೀಯ ಆಟಗಾರ ನಿರ್ಮಿಸಿರದ ದಾಖಲೆ ಎಂಬುದು ವಿಶೇಷ.

ಜಯದೇವ್ ಉನಾದ್ಕಟ್ 12 ವರ್ಷಗಳ ಹಿಂದೆ ಭಾರತದ ಪರ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. 2010, ಡಿಸೆಂಬರ್ 16 ರಂದು ಸೌತ್ ಆಫ್ರಿಕಾ ವಿರುದ್ಧ ಚೊಚ್ಚಲ ಪಂದ್ಯವಾಡಿದ್ದ ಉನಾದ್ಕಟ್ 2ನೇ ಪಂದ್ಯವಾಡುತ್ತಿರುವುದು ಬರೋಬ್ಬರಿ 12 ವರ್ಷಗಳ ಬಳಿಕ. ಇದರ ನಡುವೆ ಟೀಮ್ ಇಂಡಿಯಾ 118 ಟೆಸ್ಟ್ ಪಂದ್ಯಗಳನ್ನಾಡಿದೆ.

ಇದರೊಂದಿಗೆ ಚೊಚ್ಚಲ ಟೆಸ್ಟ್ ಪಂದ್ಯವಾಡಿ ಅತೀ ಹೆಚ್ಚು ಪಂದ್ಯಗಳನ್ನು ತಪ್ಪಿಸಿಕೊಂಡ ಭಾರತೀಯ ಆಟಗಾರ ಎಂಬ ಅಪರೂಪದ ದಾಖಲೆ ಇದೀಗ ಜಯದೇವ್ ಉನಾದ್ಕಟ್ ಪಾಲಾಗಿದೆ. ಈ ಮೂಲಕ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಪರ ದೀರ್ಘಾವಧಿಯ ಬಳಿಕ ಕಂಬ್ಯಾಕ್ ಮಾಡಿದ ಹಿರಿಮೆಗೂ ಎಡಗೈ ವೇಗಿ ಪಾತ್ರರಾಗಿದ್ದಾರೆ.

ಇದಾಗ್ಯೂ ಚೊಚ್ಚಲ ಪಂದ್ಯವಾಡಿ ಅತೀ ಹೆಚ್ಚು ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಂಡ ವಿಶ್ವ ದಾಖಲೆ ಇಂಗ್ಲೆಂಡ್ನ ಗರೆಥ್ ಬ್ಯಾಟಿ ಹೆಸರಿನಲ್ಲಿದೆ. ಗರೆಥ್ ಮೊದಲ ಟೆಸ್ಟ್ ಪಂದ್ಯವಾಡಿದ ಬಳಿಕ ಬರೋಬ್ಬರಿ 142 ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.

ಇದೀಗ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ 118 ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಂಡ ಜಯದೇವ್ ಉನಾದ್ಕಟ್ ಕಾಣಿಸಿಕೊಂಡಿರುವುದು ವಿಶೇಷ.

ಇನ್ನು ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಬಾಂಗ್ಲಾದೇಶ್ ತಂಡವು 227 ರನ್ಗಳಿಗೆ ಆಲೌಟ್ ಆಗಿದೆ. ಟೀಮ್ ಇಂಡಿಯಾ ಪರ ಉಮೇಶ್ ಯಾದವ್ 4 ವಿಕೆಟ್ ಕಬಳಿಸಿದರೆ, ಜಯದೇವ್ ಉನಾದ್ಕಟ್ 2 ವಿಕೆಟ್ ಪಡೆದಿದ್ದಾರೆ. ವಿಶೇಷ ಎಂದರೆ ಈ ಪಂದ್ಯದ ಮೂಲಕ ಉನಾದ್ಕಟ್ ಟೆಸ್ಟ್ ವಿಕೆಟ್ ಖಾತೆಯನ್ನು ತೆರೆದಿದ್ದಾರೆ.